ಜನ ನೋಡದ ಮಲೆನಾಡಿನ ಕಾಡಿನ ಮೂಲೆಯ ಒಂದು ಕಿರುಹೊದರಿನಲಿ ಮೂಡಿ, ತೆಂಗಾಳಿಯಲಿ ತಳಿರ ಹಿಂದೆ ಬಳುಕಿ ನಲಿದು, ನಾಚುವ ಚೆನ್ನೆಯ ಚೆಲ್ವಿನ ಕೆನ್ನೆಯಲಿ ಸುಳಿವ ಬೆಳ್ಗೆಂಪಿನ ಬಣ್ಣದ ಹೂವಿನಂತೆ ನಮ್ರ ಗರ್ವದಿಂದ ಬಾಳುವುದನು ನನಗೆ ಕಲಿಸು, ಓ ಸೌಂದರ್ಯ ಯೋಗಿ!

ಮಹತ್ತಾದ ಸಹ್ಯಾದ್ರಿಶ್ರೇಣಿಗಳ ಅಜ್ಞಾತ ಶಿಖರವೊಂದರಲಿ ತಲೆಯೆತ್ತಿ ನಿಂತಿರುವ ಕರಿಯ ಹೆಬ್ಬಂಡೆಯ ಮೇಲೆ, ಬಿತ್ತರದ ಬಾನಿಗೆದುರಾಗಿ, ಮಹಾ ವಿಶ್ವಸಮ್ಮುಖದಲಿ ಕಾಳೊಂದನು ಕಚ್ಚಿಕೊಂಡು ಎಡೆಬಿಡದೆ ದುಡಿಯುತ್ತ ಹರಿಯುವ ಸಣ್ಣ ಇರುವೆಯೊಂದರಂತೆ ಉತ್ಸಾಹದಿಂದ ಕೆಲಸಮಾಡುವುದನು ನನಗೆ ಕಲಿಸು, ಓ ಕರ್ಮಯೋಗಿ!

ಮಲೆನಾಡಿನ ನಿರ್ಜನ ನೀರವ ವಸಂತ ವನಗಳ ನಡುವೆ ಪ್ರಭಾತ ಸಮಯದಲಿ ಹೆಮ್ಮರವೊಂದರ ನಡುನೆತ್ತಿಯ ಮೇಲೆ ಕುಳಿತುಕೊಂಡು ಸುಮನೋಹರವಾಗಿ ರಾಗಾಲಾಪನೆ ಮಾಡುತ್ತ ಗಾನಗೈಯುವ ಕಾಜಾಣ ಪಕ್ಷಿಯಂತೆ ಸದಸ್ಯ ನಿರಪೇಕ್ಷಣೀಯವಾದ ಆತ್ಮಾನಂದದಿಂದ ಹಾಡುವುದನು ಕಲಿಸೆನಗೆ, ಓ ಸ್ವರಯೋಗಿ!

ಶ್ರೀರಾಮಚಂದ್ರನ ಮಹಾಸೇತು ಮುಂದುವರಿದಂತೆ ನೋಡಿ ನೋಡಿ ಹಿಗ್ಗಿದ ಪುಟ್ಟ ಅಳಿಲಿನ ಹೃದಯದ ಮಹಾನ್‌ಮಹಿಮೆಯನು ನನಗೆ ಕಲಿಸು, ಓ ಯೋಗೀಂದ್ರ ಯೋಗಿ!