ಬೆಳಗಿನಿಂದ ಬೈಗಿನವರೆಗೂ ಆಟವಾಡಿ ಕುಣಿದು, ದಣಿದು, ಸಂಜೆಗತ್ತಲಿಳಿದು ಬರಲು, ನಾನು ನಿನ್ನೆಡೆಗೆ ಮರಳಿದಾಗ ನೀನೇನು ಕೇಳುವೆ?

ಸಾಲವೆನಿತಾಯಿತೆಂದು ಕೇಳುವೆಯೇನು?
ಸಂಪಾದನೆ ಎನಿತೆಂದು ಕೇಳುವೆಯೇನು?
ಬಟ್ಟೆಯೇಕೆ ಹರಿಯಿತೆಂದು ಕೇಳುವೆಯೇನು?
ಮೈಯೆಲ್ಲ ಮಣ್ಣಾಯಿತೇಕೆಂಬೆಯೇನು?
ಪುಣ್ಯಪಾಪಗಳ ಆಯವ್ಯಯವ ಕೇಳುವೆಯೇನು?
ಇಲ್ಲ, ಎಂದಿಗೂ ಇಲ್ಲ!

ನಾನು ನಗದಿದ್ದರೆ ಮಾತ್ರ ನೀನು ಕೇಳುವೆ: “ಮಗುವೆ, ಬೆಳಗಾಗ ನೀನು ಆಟಕ್ಕೆ ಹೊರಟಾಗ ನಿನ್ನ ಮುದ್ದು ಮೊಗದ ಮೇಲೆ ನಾ ಮುತ್ತಿಟ್ಟು ತೊಡಿಸಿದ ಆ ಚೆಲುವಿನ ಮುಗುಳುನಗೆಯೆಲ್ಲಿ?”

ಅದಕಾಗಿಯೆ, ಆಟದಲಿ ಎಲ್ಲವನು ತೊರೆದಿರುವ ನಾನು, ನಿನ್ನ ಮುದ್ದು ಮುತ್ತಿನ ಮುಗುಳುನಗೆಯನು ಮಾತ್ರ ಮೊಗದಿಂದುರುಳದಂತೆ ಬಿಡದೆ ಹಿಡಿದಿರುವೆನು.