ಮಡಿದರವರು, ಹೋದರಿವರು, ಇವನು ಅಳನೇಕೆ? ಎಂದು ಅವರಿವರಾಡಿ ಕೊಂಬರು.

ಅಕ್ಕರೆ ಇಲ್ಲದವರು, ಕಂಬನಿಯಿಲ್ಲದವನು, ಕಲ್ಲೆದೆಯವನು, ಎಂದೆಲ್ಲ ನುಡಿಯುವರು.

ಒಲವಿರುವುದೆನಗೆ, ಕಣ್ಣೀರಿಹುದೆನಗೆ, ಮೆಲ್ಲೆದೆಯಿಹುದೆನಗೆ.
ಕಂಬನಿಯೆಲ್ಲವನು ನನ್ನ ಎದೆದಾವರೆಯೆಲೆಯಲಿ ನಿನಗಾಗಿ ತುಂಬಿರುವೆನು.

ಕಾಲಾನಂತರದಲಿ ಒಂದೊಂದು ಕಂಬನಿಯೂ ಒಂದೊಂದು ಸವಿಗಾನವಾಗಿ ಹೊರಹೊಮ್ಮಲು ಅವುಗಳನೆಲ್ಲ ನಿನ್ನ ಚರಣತಲದಲಿ ನಿವೇದಿಸಿ ಸುಮ್ಮನಾಗುವೆನು.

ಅವರ ಕಂಬನಿಗಳೆಲ್ಲ ನಶ್ವರ; ನಿನ್ನ ಚರಣತಲದಲ್ಲಿ ಗಾನಮಣಿಗಳಾಗಿ ನಲಿಯುವ ನನ್ನ ಅಶ್ರು ಅವಿನಶ್ವರ!