ನಿನ್ನೊಡಗೂಡಿ ನಾನೆಂದು ಪಯಣ ಹೊರಟೆನೊ ನಾನರಿಯೆ; ಯಾವ ಕಜ್ಜವ ಕೈಗೂಡಿಸಲು ಹೊರಟೆನೊ ನಾನರಿಯೆ. ನಿನ್ನೊಡನೆ ಎನಿತು ಊರು ಹಳ್ಳಿಗಳನು ದಾಂಟಿ ಬಂದೆನೊ ನಾನರಿಯೆ. ಎಲ್ಲವನು ಮರೆತಿರುವೆನು.

ದಾರಿಯೊಳು ಆರಾರ ಗೆಳೆತನವ ಬೆಳೆಸಿ, ಆರಾರನೊಲಿದು, ಆರಾರಿಗೆ ಆವಾವ ಹಾಡುಗಳನು ಹಾಡಿದೆನೊ, ಒಂದನೂ ನಾನರಿಯೆ. ಎಲ್ಲವನು ಮರೆತಿರುವೆನು.

ಅಂತೂ ನಿನ್ನೊಡನೆ ಬಹುದೂರ ನಡೆದು ಬಂದಿರಬೇಕು. ಪಯಣದಲಿ ನಿಡುದಾರಿ ಕಳೆದಿರಬೇಕು.

ಪಯಣದಲಿ ಎನಿತು ಹಗಲಿರುಳುಗಳು ಹೊಳೆದಳಿದು ಹೋದುವೊ ನಾನರಿಯೆ.

ಏಕೆಂದರೆ, ದಾರಿಯೆಡೆ ಬಳಲಿ ಮಲಗಿರಲು, ಬಿಟ್ಟು ಬಂದ ನೋಟಗಳೆಲ್ಲ ಕನಸಿನಲಿ ಸುಳಿಯುವುವು; ಹಿಂದೆ ಹಾಡಿದ ಹಾಡುಗಳೆಲ್ಲ ಮರಳಿ ಮೊರೆಯುವುವು. ಮರೆತ ಮೊಗಗಳು ಮರಳಿ ಮೈದೋರುವುವು.

ನೀನೇಕೆ ಮೌನವಾಗಿರುವೆ; ನೀನೂ ನನ್ನಂತೆ ಎಲ್ಲವನು ಮರೆತುಬಿಟ್ಟಿಹೆಯೇನು?