ತೊಳೆದಿಟ್ಟ ನೀಲಿಯ ಗಾಜಿನಂದದಿ ಬಾನು ಮೇರೆಯಿಲ್ಲದೆ ಹಬ್ಬಿದೆ.

ನಟ್ಟನಡುವೆ ತಿಳಿಬೆಳುದಿಂಗಳನು ಸೂಸಿ ಚೆಲುವಿನರಸಾಗಿ ತಿಂಗಳು ಮೆರೆಯುತ್ತಿದೆ.

ಬೆಳ್ದಿಂಗಳ ಸೋನೆಯಿಂದ ತಿರೆಯೆಲ್ಲ ತೊಯ್ದು ಹೋಗಿದೆ; ತುಂಬಿ ತುಳುಕುತ್ತಿದೆ ಜಗತ್ತು.

ಶೀತಲ ಜ್ಯೋತ್ಸ್ನಾ ಜ್ಯೋತಿಯಲ್ಲಿ ನಕ್ಷತ್ರಗಳೂ ನಾಚಿ ಕಣ್ಮರೆಯಾದಂತಿವೆ.

ಎಲ್ಲ ನೀರವ; ಎಲ್ಲ ನಿಶ್ಚಲ.
ಕಾಡಿಗೆ ನಿದ್ದೆ; ನಾಡಿಗೆ ನಿದ್ದೆ; ಬೆಟ್ಟಕೆ ನಿದ್ದೆ; ಕೊಳಕ್ಕೆ ನಿದ್ದೆ.
ನಿನ್ನ ಬರವನೆ ಹಾರೈಸಿ ನಾನೊಬ್ಬಳೆ ಎಚ್ಚತ್ತಿರುವೆ.
ಬಾ ನನ್ನ ದೊರೆಯೆ, ಬಾ ನನ್ನೆದೆಗೆ.
ನೀನಿರದಿರೆ ಸೊಬಗು ಸುಡುಗಾಡಲ್ತೆ?
ನೀನು ಬರೆ ಸುಡುಗಾಡು ಸೊಬಗುವೀಡಲ್ತೆ?

ನಾಡಿನ ನಿದ್ದೆ ನನ್ನ ಕಣ್ಣಿಗೈತಹ ಮುನ್ನ, ಕಾಡು ಬೆಟ್ಟಗಳಂತೆ ನಾನೂ ಕಣ್ಣು ಮುಚ್ಚುವ ಮುನ್ನ, ಸರೋವರದ ಮೂರ್ಛೆ ನನ್ನನು ಆವರಿಸುವ ಮುನ್ನ, ಬೆಳ್ದಿಂಗಳು ಬಾಡುವ ಮುನ್ನ, ನನ್ನ ದೊರೆಯೆ, ಬಾ ನನ್ನೆದೆಗೆ!