ಈ ದೀರ್ಘಯಾತ್ರೆ ಎಂದಿಗೆ ಮುಗಿಯುವುದೊ ನಾನರಿಯೆ. ಆ ಪುಣ್ಯ ಕ್ಷೇತ್ರ ಎಂದಿಗೆ ದೊರೆಯುವುದೊ ನಾನರಿಯೆ. ಅಂತೂ ನಾನೇನೊ ಯಾತ್ರೆ ಹೊರಟಿರುವೆ. ತಪ್ಪದೆ ಹಾದಿ ನಡೆಯುತ್ತಿರುವೆ. ಎಲ್ಲಿಯೂ ನಿಲ್ಲದೆಯೆ, ಎತ್ತಲೂ ನೋಡದೆಯೆ ಹಾದಿ ನಡೆಯುತ್ತಿರುವೆ.

ನಾನು ಹೊರಟಿರುವ ಈ ಹಾದಿಯಲ್ಲಿ ಹೊರಟಿರುವರೊಬ್ಬರನೂ ನಾ ಕಾಣೆ. ಅರೆ ಹಾದಿ ಬಂದಿರುವೆ. ಜೊತೆಗಾರರಾರಿಲ್ಲ. ಒಬ್ಬನೆ, ನಾನೊಬ್ಬನೆ ಹೋಗುತ್ತಿರುವೆ.

ಯಾತ್ರೆ ಹೊರಟಾಗ ಎನಿತೆನಿತೊ ಗೆಳೆಯರನು ಜೊತೆಗಾರರೆಂದು ಬಯಸಿದೆ. ಆದರೀಗ ತಿಳಿದೆ: ನನಗೆ ನೀನಲ್ಲದೆ ಬೇರೆ ಸಂಗಡಿಗರಾರಿಲ್ಲ.

ಬರುವೆವೆಂದವರಲ್ಲಿ ಕೆಲರು ಬರಲಿಲ್ಲ. ಬಂದ ಕೆಲವರು ಹಿಂದಿರುಗಿದರು. ಕೆಲರು ಕಾಡನು ಕಂಡು, ಕೆಲರು ಬೆಟ್ಟವ ಕಂಡು, ಕೆಲರು ಮರುಭೂಮಿಯನು ಕಂಡು, ಕೆಲರು ತುಂಬು ಹೊಳೆಯನು ಕಂಡು ಹೆದರಿ ಹಿಂದಿರುಗಿದರು.

ಮತ್ತೆ ಕೆಲವರಿಗೆ ಗುರಿಯ ನೆಚ್ಚಳಿದು ಹೋಯ್ತು. ಮರುಳ್ಗಾಡ ಕಂಡೊಡನೆ ಹಿಂದುಳಿದ ಹಸುರುನೆಲವನು ನೆನೆದು ನೆವಗಳನು ತಂದೊಡ್ಡಿ ಕವಲೊಡೆದ ಹಾದಿಯಲಿ ಕಣ್ಮರೆಯಾದರು.

ಎಳೆ ಬಿಸಿಲು ಒಯ್ಯೊಯ್ಯನೆ ಬೆಳೆ ಬಿಸಿಲಾಗಿ ನಡು ಹಗಲಾಗಿ ಉರಿ ಬಿಸಿಲೇರುತಿರೆ ನಾನೊಬ್ಬನೆಯೆ ಹೆಗಲ ಮೂಟೆಯ ಹೊತ್ತು ತಲೆಬಾಗಿ ಸಾಗಿದೆ. ನನ್ನೆಡೆಯಲಿ ಇದ್ದವರೆಂದರೆ ನೀನು, ನನ್ನ ನೆಳಲು.

ಮೌನ ನಿರ್ಜನತೆಗಳ ಭೀಷಣ ಗುರುಭಾರವನು ಪರಿಹರಿಸಿಕೊಳ್ಳಲು ಹಾಡಿ ಹಾಡಿ ಮುಂದೆ ಸಾಗಿದೆ.

ಕೆಲವು ಸಾರಿ ಹಿಂದೆ ಯಾರಾದರೂ ನನ್ನ ಹಾದಿಯಲಿ ಹೊರಟ ಜೊತೆಗಾರರು ಬರುವರೇನೊ ಎಂದು ಹಾರೈಸಿ ಮರದ ನೆರಳಲಿ ಕುಳಿತು ಕಾದೆ. ಯಾರೂ ಬಾರದಿರಲು ನಿಡುಸುಯ್ದು ಅಲ್ಲಿಂದೆದ್ದು ನನ್ನ ಹಾದಿಯಲಿ ನನಗಿಂತಲೂ ಮುಂದೆ ಹೊರಟ ಜೊತೆಗಾರರು ಸಿಗುವರೇನೊ ಎಂದು ಬಯಸಿ ಬೇಗಬೇಗನೆ ಬಿಸಿಲನೆಣಿಸದೆ ಓಡಿದೆ. ಗುಡ್ಡಬೆಟ್ಟ ಕಣಿವೆಗಳ ನಡುನಡುವೆ ಸುತ್ತಿ ಬಳುಕಿ ಹೋಗಿದ್ದ ಆ ಕೊನೆಗಾಣದ ದಾರಿಯಲ್ಲಿ ಯಾರೊಬ್ಬರೂ ಕಣ್ಣಿಗೆ ಕಾಣದಿರಲು ನಿರಾಶೆಯಿಂದ ಕಾಲು ಸೋತು ಮೆಲ್ಲನೆ ಹರಿಯತೊಡಗಿದೆ.

ನಾನು ಹಿಡಿದಿದ್ದು ವಕ್ರಪಥವೊ? ಅಥವಾ ವಿಚಿತ್ರ ವೀಥಿಯೊ? ಅಥವಾ ನನ್ನ ಭೈರವಯಾತ್ರೆ ಇನ್ನುಳಿದವರಿಗಸದಳವೊ?

ನನ್ನದು ಕಾವಿಯ ದಾರಿಯಲ್ಲ; ಸಂಸಾರಿಯ ದಾರಿಯಲ್ಲ. ನನ್ನದು ಮೂರನೆ ದಾರಿ: ನಾನು ಮುರಾರಿ!