ಮಾಗಿಯ ಬಿಳಿಮಂಜು ಹಿಟ್ಟಿನ ಸೋನೆಯಂತೆ ದಟ್ಟವಾಗಿ ಬೀಳುತ್ತಿದೆ. ಆಕಾಶ ಮುಸುಗುಹಾಕಿಕೊಂಡು ಭೂಮಿಗೆ ಬಂದಿದೆ; ಒಂದೇ ಮಾರು ದೂರದಲ್ಲಿ ಸರೋವರದ ಮೇಲೆ ನಿಂತಿದೆ!

ಕಿರುಗೊಳ ಅನಂತ ಕಡಲಾಗಿದೆ!
ತಿರೆಯ ಮೇಲೆ ಕನಸಿನ ಪರದೆ ಬಿದ್ದಿದೆ.

ಈ ಮಾಗಿಯ ಬೆಳಗಿನಲ್ಲಿ ನೀನೂ ಬಾನಿನಂತೆ ಮಂಜಿನ ಮುಸುಗು ಹಾಕಿಕೊಂಡು ಸುಳಿದಾಡುತಿರುವೆಯೇನು? ಇಲ್ಲದಿರೆ ನನಗೇತಕೆ ಈ ನಿನ್ನ ಹುಚ್ಚು?