ವಿಶ್ವದ ವರ್ಣಶಿಲ್ಪಿ ಸಂಧ್ಯಾಗಗನಪಟದಲ್ಲಿ ನೂರಾರು ಬಣ್ಣಗಳಿಂದ ಸಾವಿರಾರು ಚಿತ್ರಗಳನು ಬರೆದಿದ್ದನು.

ಅಲ್ಲಿ ಹರಿದು ಹರಿದು ಸೋತು ನಿಂತ ಹೊಳೆ; ಇಲ್ಲಿ ತೆರೆಗಳಿಲ್ಲದೆ ನಿದ್ದೆಗೈಯುವ ಕೆರೆ. ಅತ್ತ ಮೇರೆಯರಿಯದ ಕಡಲೊಂದರ ಕರೆ; ಇತ್ತ ಹೊನ್ನಿನ ಮಳಲು ದಿಣ್ಣೆ. ಅಲ್ಲಿ ಬೆಟ್ಟ, ಇಲ್ಲಿ ಬಂಡೆ; ಅಲ್ಲಿ ಬನ, ಇಲ್ಲಿ ಮನೆ; ಅಲ್ಲಿ ಹುಲಿ, ಇಲ್ಲಿ ಕರಡಿ.-ನೂರಾರು ಬಣ್ಣಗಳು! ಸಾವಿರಾರು ಚಿತ್ರಗಳು!

ನಾನು ಹಸುರು ಹುಲ್ಲಿನ ಬಯಲ ಮೇಲೆ ಕುಳಿತು ಆ ಮೇಘ ವಿರಚಿತ ಯಕ್ಷಲೋಕದಲ್ಲಿ ತಿರುಗಾಡಿದೆ. ಒಬ್ಬನೆಯೆ ಆ ಹೊನ್ನಿನ ಹೊಳಲಿನಲ್ಲಿ ಮನ ಬಂದಂತೆ ಸುತ್ತಿದೆ.

ಒಯ್ಯೊಯ್ಯನೆ ಹಕ್ಕಿಗಳ ಕೂಗು ನಿಂತಿತು. ನಗರಕೈದುವ ಎತ್ತಿನ ಗಾಡಿಗಳ ಕಟಕಟ ಸದ್ದು ಮಾತ್ರ ಕೇಳಿ ಬಂದಿತು.

ಪಡುವಲೆಡೆಯ ಬಣ್ಣ ಬದಲಾಯಿಸಿತು; ಚಿತ್ರ ಬದಲಾಯಿಸಿತು. ನೀಲವರ್ಣ ಮಿಶ್ರವಾದ ಬೂದುಬಣ್ಣದ ಹೆಮ್ಮುಗಿಲುಗಳು ಬೆಟ್ಟಗಳಂತೆ ನಿಂತುವು. ಅವುಗಳ ಹಿಂದೆ ತುಸುನಸುಗೆಂಪು ನಲಿದಿತ್ತು.

ಸಾಯಂಕಾಲವು ಧ್ಯಾನಮಗ್ನಳಾದ ಮಹಾ ತಪಸ್ವಿನಿಯಂತಿತ್ತು.

ಆಕಾಶದ ಒಂದು ಮೂಲೆಯಲ್ಲಿ ತದಿಗೆಯ ಚಂದ್ರನು ಗುಟ್ಟಾಗಿ ಹೊಳೆಯುತ್ತಿದ್ದನು.

ಒಯ್ಯೊಯ್ಯನೆ ಇರುಳಿಳಿಯ ತೊಡಗಿತು.
ಇರುಳು ಹಗಲನು ಚುಂಬಿಸುವ ಸಮಯದಲ್ಲಿ ನೀನೆನ್ನ ಚುಂಬಿಸಿದೆ.
ನಿನ್ನನುರಾಗ ನನ್ನೆದೆಯನು ತುಂಬಿತುಳುಕಿತು.