ಏಳುತಿದೆ ಗೋಧೂಳಿ ಮಲೆಯ ಕಣಿವೆಯಲಿ ಬೈಗುಬಾನಿಗೆ ಓಕುಳಿಯನೆರಚಿ.

ಹಳ್ಳಿಯ ಹಟ್ಟಿಗೆ ದನಕರು ಹಿಂತಿರುಗುವಂತೆಯೆ ಅದೊ ಮುಗಿಲ ದೇವಗೋವು ಕಾಲ್‌ನಡೆಯುತಿವೆ ಪಶ್ಚಿಮಾಚಲದ ಕಾನ್‌ಕೊಟ್ಟಿಗೆಗೆ. ಮರ ಮರಗಳಲ್ಲಿ ಗೊತ್ತುಕೂರುವ ಹಕ್ಕಿಗಳುಲಿಯೊಡನೆ ಕೇಳಿಬರುತಿದೆ ಆಲಿಸಾ ಗೋಕಂಠ ಕಿಂಕಿಣಿಯ ನಿಕ್ವಣನ ಪಂಕ್ತಿ.

ಲೋಕ ಲೋಕಂಗಳನು ತನ್ನ ತೊಟ್ಟಿಲೊಳಿಟ್ಟು ಜೋಗುಳವನುಲಿದು ತೂಗುತಿದೆ ಆ ಟಿಂ ಟಿಂ ಟಿಂಟಿಣಿಯ ಪಂತಿ!

ಭಾವ ವೀಚಿಗಳಳಿದು ಹೃದಯ ಸರೋವರ ನಿಸ್ತರಂಗ!
ಚಿಂತೆಯೂರ್ಮಿಗಳುಡುಗಿ ಚಿತ್ತವಾರಧಿ ಅಚಂಚಲ!
ಉಳಿದೆಲ್ಲ ಉಪಾಧಿಗಳನುಳಿದಾತ್ಮ ತಾನೆ ಕಿಂಕಿಣಿ!
ಆತ್ಮಸಂಧ್ಯಾಧೇನು ಕಿಂಕಿಣಿ!
ಅರ್ಥಮುಕ್ತ, ಭಾವದೀಪ್ತ, ಧ್ವನಿಪ್ರಚುರ, ಕೇಳ್:
ಧ್ಯಾನಧೇನು ಕಿಂಕಿಣಿ!