ಓ ದಿವ್ಯ ಶಿಲಾಮೂರ್ತಿ, ಜನ್ಮಜನ್ಮಾಂತರಗಳಲ್ಲಿ ಕಲ್ಪಕಲ್ಪಾಂತರಗಳಿಂದಲೂ ನಿನ್ನೆದುರು ನಿಂತು ಜೀವನದಾರತಿಯನೆತ್ತುತಿಹೆನು.

ನಮೆದು ಮುಗಿಯದಿಹ ಕರ್ಪೂರವನು ನೆಚ್ಚುಗೆಡದೆಯೆ ಬೇಸರದೆ ಮುದದಿಂದ ತುಂಬುತಿಹೆನು.

ಆದರೂ ನೀನು ಮಾತಾಡದಿರುವೆ, ಅಲುಗಾಡದಿರುವೆ, ಕಣ್ದೆರೆಯದಿರುವೆ. ನಂಬುಗೆ ನಡುಗುವುದೊ ಏನೊ ಎಂಬಂತೆ ಸುಮ್ಮನಿರುವೆ.

ಸುಟ್ಟ ಸೂಡಿನ ಮೇಲೆ ಮರಳಿ ಮೂಡಿಬಂದು ನಿನ್ನ ಪೂಜೆಯ ಮಾಡುತಿಹೆನು.

ಗುಡಿತುಂಬ ಬಿದ್ದಿರುವುದು ಸುಟ್ಟೆಲುಬುಗಳ ರಾಶಿ; ಜನ್ಮ ಜನ್ಮಗಳಲ್ಲಿ ಎನಗಿದ್ದ ದೇಹಗಳ ಹೆಣಬೂದಿ ಸುತ್ತಲೂ ಬೆಟ್ಟವಾಗಿರುವುದು.

ಆದರೂ ನೀನಿನ್ನೂ ದಯೆದೋರದಿರುವೆ, ಓ ರಮ್ಯ ಶಿಲಾಮೂರ್ತಿ.

ನಿನ್ನ ಕೃಪೆಯೆನಗಾಗಿಹುದು, ಬಲ್ಲೆ. ನಿನ್ನರಿವು ಇನಿತೆನಗೆ ಬಂದಿಹುದು, ಬಲ್ಲೆ. ಆದರವುಗಳನೊಲ್ಲೆ; ನೀನೆ ನೀನೆನಗೆ ಬೇಕು.

ಮಸುಕು ಮಬ್ಬುಗಳು ಸಾಕು; ಸೂಚನೆಗಳು ಸಾಕು; ವೇಷದಾಟಗಳು ಸಾಕು; ನನಗಿಂದು ನೀನೆ ಬೇಕು.

ಕಲ್ಲಿಗೇ ಕಣ್‌ಬಂದು, ಕಲ್ಲಿಗೇ ಉಸಿರ್‌ಬಂದು, ಕಲ್ಲಿಂದೆ ನೀನು ಹೊರ ಹೊಮ್ಮಿ ಬಂದುದನು ಕಾಣಬೇಕೆಂಬುದೇ ನನ್ನ ನಿಡುಬಯಕೆ.

ನಟನೆಯನು ಬಿಟ್ಟೆನಗೆ ಮೈದೋರು, ಓ ಪುಣ್ಯ ಶಿಲಾಮೂರ್ತಿ.