ನಾನಂದು ಯಾತ್ರೆ ಹೊರಟಂದು ವಿಶ್ವ ಮೌನದಿಂದಿತ್ತು. ದೇಶ ನಿದ್ದೆಗೈದಿತ್ತು. ಕಾಲ ಕನವರಿಸಿತ್ತು. ಕತ್ತಲೆ ಬೆಳಕಿನ ಗಬ್ಬದಲಿ ಮಲಗಿತ್ತು. ಬೆಳಕು ಕಣ್ ಮುಚ್ಚಿತ್ತು. ಸೂರ್ಯಾದಿ ಗ್ರಹ ಚಂದ್ರ ನಕ್ಷತ್ರಗಳು ಸೊನ್ನೆಯಲಿ ಗೊಣಗುತಿದ್ದುವು, ನಾನಂದು ಯಾತ್ರೆ ಹೊರಟಂದು.

ನಾನು ಹೊರಡಲು ದೇಶ ಮೈಮುರಿದೆದ್ದಿತು. ಕಾಲ ಎಚ್ಚರಗೊಂಡಿತು. ಬೆಳಕು ಕಣ್ದೆರೆಯಿತು; ಅದರ ಕಣ್ಣಿನಿಂದ ಕತ್ತಲೆ ಹೊರಹೊಮ್ಮಿತು. ಸೂರ್ಯಾದಿ ಗ್ರಹ ಚಂದ್ರ ನಕ್ಷತ್ರಗಳು ನನ್ನೊಡನೆ ಬರುತ್ತೇವೆ ಎಂದು ಅಳತೊಡಗಿದುವು.

ಕಡೆಗೆ ಎಲ್ಲರೂ ನನ್ನನ್ನು ಹಿಂಬಾಲಿಸಿದರು.

ಯಾತ್ರೆಯ ಹುಚ್ಚಿಗೆ ನಾನೆ ಕಾರಣನಾದೆ.

ಇಂದು ನೆನಹು ಅಲ್ಲಿಗೆ ನುಗ್ಗಲರಿಯದು; ಮನವು ಹಿಂಜರಿಯವುದು. ಜೊತೆ ಬಂದ ಯಾತ್ರಿಕರೊ ಬರಿಯ ಹೇಡಿಗಳು.

ದೇಶ, ಕಾಲ, ಬೆಳಕು, ಕತ್ತಲೆ, ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲರೂ ಬರಿಯ ಬೆಪ್ಪುಗಳು-ನನ್ನ ಸಹ ಯಾತ್ರಿಕರು!

ಹಿಂದೆ ನೋಡುವುದಿಲ್ಲ; ಮುಂದೆ ನೋಡುವುದಿಲ್ಲ. ಕುರಿಗಳಂದದಿ ಬರಿದೆ ನನ್ನೊಡನೆ ಕುರುಡು ನಂಬುಗೆಯಿಂದ ಬೆನ್ನಿನೊಳೆ ತೇಲಿ ಬರುತಿಹರು.

ನಾನು ಹಾದಿ ತಪ್ಪಿದರೆ ಅವರೂ ತಪ್ಪುವರು; ನಾನು ಹಾದಿ ಹಿಡಿದರೆ ಅವರೂ ಹಿಡಿವರು. ದಾಸನ ದಾಸಾನುದಾಸರಂತಿಹರಲ್ಲಾ, ನನ್ನ ಸಹ ಯಾತ್ರಿಕರು!

ನಾನು ಕತ್ತಲೆಯಲ್ಲಿ ತಡಹುತ್ತಿಹೆನು. ನನ್ನ ಸೊಲ್ಲನು ಕೇಳಿ ಎಲ್ಲ ನುಗ್ಗಿಬರುತಿಹರು.

ಎಷ್ಟು ಸಾರಿ ಹಾದಿ ತಪ್ಪಿದೆ? ಎಷ್ಟು ಸಾರಿ ಡೊಂಕುದಾರಿ ಹಿಡಿದೆ? ನನ್ನಿಯನ್ನರಸುವುದರಲ್ಲಿರಲಿ, ಸುಳ್ಳನುಳಿವುದರಲ್ಲಿಯೆ ಎನಿತು ಬಲಗುಂದಿ ಹೋದೆ?

ಆದರೆ ನೀನು ಮುಗಳ್ನಗೆ ಬೀರುತ್ತಿರುವೆ ದೂರದಲಿ ನಿಂತು!