ಎಂದಿಗೈತರುವೆ? ಓ ಎನ್ನ ದೊರೆಯೆ, ಈ ಎನ್ನ ಗುಡಿಗೆ ನೀನೆಂದಿಗೈತರುವೆ?

ನೀನಿರುವೆ ಎಂದಾನು, ನೀ ಬರುವೆ ಎಂದಾನು ಗುಡಿಯ ಕಟ್ಟಿದೆ; ಕಟ್ಟಿ ಕಾಯುತಿರುವೆ.

ನೀ ಬರಲು ಕುಳ್ಳಿರಿಸಲೆಂದಾನು ಸ್ವರ್ಣಪೀಠವನೆ ಸಿದ್ಧಮಾಡಿರುವೆ; ನಿನ್ನನೇ ಎದುರುನೋಡುತ್ತಿರುವೆ.

ಹೂಗಳನು ಕೊಯ್ದು ತಂದಿರುವೆ; ಮಾಲೆಗಳ ನೆಯ್ದು ನಿಂದಿರುವೆ. ಗುಡಿಯ ಗುಡಿಸಿರುವೆ; ತೊಳೆದು ರಂಗವಲ್ಲಿಯ ಬರೆದು ಸಿಂಗಾರಮಾಡಿರುವೆ. ಗಂಧ ಗುಗ್ಗುಳ ಹೊತ್ತಿಸಿರುವೆ; ಕೀರ್ತನೆಗಳನು ಹಾಡುತಿರುವೆ.

ನೀ ಬರುವೆ ಎಂಬುದನು ಜನರಿಗೊರೆದೆ; ಬಂದೆಲ್ಲ ಕಾದು ಕಾದು ಹಿಂತಿರುಗಿದರು, ದೊರೆಯೆ.

ಕೇಳಿಸಿತದೊಮ್ಮೆ ನಿನ್ನ ಪ್ರಸ್ಥಾನಭೇರಿ. ಕಾಣಿಸಿತದೊಮ್ಮೆ ನಿನ್ನ ರಥಚೂಡಕೇತನ. ಆದರವು ಮರೆಯಾದುವೈ, ಓದೊರೆಯೆ, ನಿನ್ನ ಪರಿವಾರ ಪಾದ ಸಂಭೂತ ಕೆಂಧೂಳಿಯ ಮುಗಿಲಿನಲ್ಲಿ!

ಎಂದಿಗೈತರುವೆ? ಓ ಎನ್ನ ದೊರೆಯೆ, ಈ ಎನ್ನ ಗುಡಿಗೆ ನೀನೆಂದಿಗೈತರುವೆ?