ಇದೋ! ದಾರಿ ಕವಲೊಡೆದಿಹುದಿಲ್ಲ. ಇಲ್ಲಿ ನಾವಗಲಲೇ ಬೇಕು. ನಿನ್ನ ದಾರಿಯ ನೀನು ಹಿಡಿ. ನನ್ನ ದಾರಿಯು ನನಗೆ.

ಆದರೆ ನಾವಗಲುವ ಮುನ್ನ ಮುಗುಳ್ನಗೆಯ ಬೀರಿ ಬೀಳ್ಕೊಳ್ಳುವೆನು ನಿನ್ನ.

ನೀನೆನ್ನ ಮರೆತು ಬಿಡುವೆ; ನಾ ಬಲ್ಲೆ. ಆದರೆನ್ನೀ ಮುಗುಳ್ನಗೆಯ ನೀ ಮರೆಯಲಾರೆ; ಎಂದಿಗೂ ಮರೆಯಲಾರೆ.

ನೀನು ಹೋದೆಡೆ ಹೋಗುವುದಿದು; ನೀನು ನಿಂತೆಡೆ ನಿಲ್ಲುವುದಿದು. ಯುಗಗಳನು ದಾಟಿ, ಕಲ್ಪಾಂತರಗಳನು ಹಾಯ್ದು, ಜನ್ಮ ಜನ್ಮಾಂತರಗಳನು ನಟ್ಟುಚ್ಚಳಿಸಿ ನಿನ್ನನೆಡೆಬಿಡದೆ ಹಿಂಬಾಲಿಸುವುದಿದು.

ನಡುದಾರಿಯಲಿ ನೀನು ಎಲ್ಲಿಂದಲೊ ಬಂದು ಎನ್ನೊಡನೆ ಸೇರಿದೆ. ದಾರಿಯುದ್ದಕೂ ಇಬ್ಬರೂ ನಲಿದೆವು, ಮಾತಾಡಿದೆವು. ಒಬ್ಬರ ಬೇಸರವನೊಬ್ಬರು ಕಳೆದೆವು. ಆದರೀಗ ಅಗಲುವ ಸಮಯವೈತಂದಿದೆ.

ನೋಯದಿರು; ಮುಂದೆ ನಡೆ.

ನನ್ನ ಮುಗುಳ್ನಗೆ ನಿನ್ನೊಡನೆ ಬರುವುದು.

ಮುಂದೆ ನಾನು ಯುಗಗಳನು ದಾಟಿ, ಕಲ್ಪಾಂತರಗಳನು ಹಾಯ್ದು, ಜನ್ಮ ಜನ್ಮಾಂತರಗಳನು ನಟ್ಟುಚ್ಚಳಿಸಿ, ಎಲ್ಲರೂ ಸೇರುವೆಡೆಯಲಿ ನಿನ್ನನೆದುರುಗೊಂಡಾಗ ನಮ್ಮೊಲ್ಮೆಗೆ ಈ ಮುಗುಳ್ನಗೆಯೆ ಸಾಕ್ಷಿಯಾಗುವುದು.

ಏಕೆನೆ, ಮುಗುಳ್ನಗೆಗೆ ಮುಪ್ಪಿಲ್ಲ.