ಏಳು, ಮೇಲೇಳು! ಮತ್ತೊಮ್ಮೆ ಚಿಮ್ಮಿ ಹಾರು ಬಿತ್ತರದ ಅನಂತತೆಯೆಡೆಗೆ. ಹುಳು ಹಿಡಿದು ಹಾಳಾಗಿರುವ ಹಳೆನೆಚ್ಚುಗಳನೆಲ್ಲ ಕಳಚಿ ಕೊಚ್ಚಿಬಿಡು. ಹೊಚ್ಚ ಹೊಸನೆಚ್ಚುಗಳ ರೆಕ್ಕೆಯನು ಬಿಚ್ಚಿ ಬಾನೆಡೆಗೇರು, ಓ ಎನ್ನ ಆತ್ಮಪಕ್ಷಿ!

ನೂರು ಸಾರಿ ಸೋತಿದ್ದರೇನಂತೆ?
ನೂರೊಂದು ಸಾರಿ ಬಿದ್ದಿದ್ದರೇನಂತೆ?
ಸೋಲು ಗೆಲವಿಗೆ ಮೆಟ್ಟಲು!
ಬಿದ್ದರಲ್ಲವೆ ಮರಳಿ ಏಳುವುದು!
ಬೀಳದಿದ್ದವನು ಎಂದೂ ಮೇಲೆದ್ದವನಲ್ಲ!

ಸಮರವೆ ಜೀವನದ ತಿರುಳು; ಹೋರಾಟವೆ ಜೀವನದ ಚಿಹ್ನೆ. ಆದರ್ಶ ಪ್ರಾಪ್ತಿಯೆ ಜೀವನ ಪರಿಸಮಾಪ್ತಿ.

ಮಣ್ಣಿನಲಿ ಬಿದ್ದು ಹೊರಳಿ ಬದುಕುವುದಕಿಂತಲೂ ಬಾನಿನಲಿ ತೇಲಿ ಹಾರಿ ಸಾಯುವುದೆ ಮೇಲು.