ಬೇಸಗೆಯ ಬೇಸರ ಸುತ್ತಣಿಂದೈತಂದು ಕೆಲಸವಿಲ್ಲದ ಬಗೆಗೆ ಏನನೋ ಕರಕರೆಯ ಗೊಣಗುತಿದೆ.

ಸುಖವಿಲ್ಲ. ದುಃಖವಿಲ್ಲ, ಏನೊಂದು ಇಲ್ಲ. ನೀನುಳಿದ ಎದೆಮಣೆ ಬರಿದಾಗಿದೆ. ಶೂನ್ಯತೆಯ ಭಾರದಲಿ ಬಾಳು ಬಿರಿಯುತ್ತಿದೆ.

ತಲೆಯೆತ್ತಿ ನೋಡಿದರೆ ಅನಂತ ಗಗನದ ನೀಲವಿಸ್ತೀರ್ಣದಲಿ ಯಾವೆಡೆಯೂ ಮಳೆಮುಗಿಲಿನ ಸುಳಿವಿಲ್ಲ. ನಗ್ನದಿಗಂತವೂ ನಿರಾಶೆಯನ್ನೆ ಸೂಚಿಸುತ್ತಿದೆ.

ಗಾಳಿಯೂ ನಡೆಗೆಟ್ಟು ನಿದ್ದೆ ಮಾಡುತ್ತಿದೆ.

ತಿಳಿಗೊಳದಿಂದ ಮೇಲೆ ನೆಗೆದು ಹುಡಿಯಲ್ಲಿ ಹೊರಳಾಡುವ ಮರಿ ಮೀನಿನಂತೆ ನನ್ನಾತ್ಮ ತುಡಿಯುತ್ತಿದೆ.

ಓ ಎನ್ನ ಜೀವನದ ರಸಮೂರ್ತಿ, ಎನ್ನೆದೆಯ ಗುಡಿ ಪಾಳುಬೀಳುವ ಮುನ್ನ ಬಾ, ಮಂಡಿಸಲ್ಲಿ.