ಮಳೆಮುಗಿಲು ಮುತ್ತಿ ಆಷಾಢದ ಆಕಾಶದಲ್ಲಿ ಮಂಕು ಕವಿದಿದೆ. ದಿಗಂತದ ಅಸ್ಫುಟರೇಖೆ ರಹಸ್ಯಸೂಚಕವಾದರೂ ವಿಷಣ್ಣವಾಗಿದೆ.

ಎಡೆಬಿಡದೆ ಸುರಿಯುತಿದೆ ಬೇಸರದ ಸೋನೆ.

ಜಡಿಯ ಪೀಡನೆಗೆ ಮೊಗಗುಂದಿ ಮೈಯುಡುಗಿದಂತೆ ತೋರುತಿವೆ, ಕಿರುಬಯಲ ಗಿಡಬಳ್ಳಿ ಹೊದರು.

ನಿರಂತರ ಅವಿಶ್ರಾಂತ ವರ್ಷಧಾರೆಯ ಜವನಿಕೆಯ ಮುಸುಕು ಹಾಕಿಕೊಂಡ ಗುಡ್ಡಗಾಡುಗಳು ಬಹುದೂರದ ಕನಸುಗಳಂತಿವೆ.

ಜಗತ್ತಿನೊಡನೆ ಜೀವನವೂ ಒದ್ದೆಯಾಗಿದೆ.

ಈ ದೃಶ್ಯದಲ್ಲಿ ಯಾವೆಡೆಯಿಂದ ನೀನು ರಂಗಪ್ರವೇಶ ಮಾಡುತ್ತೀಯೊ ಎಂದು ಕಾದು ಕಾತರನಾಗಿದ್ದೇನೆ.

ಏಕೆನೆ, ನಿನ್ನೊಂದು ಚುಂಬನದಿಂದ ಪ್ರಕೃತಿ ಪ್ರಸನ್ನವಾಗುವುದು; ನಿನ್ನೊಂದು ಮುಗುಳ್ನಗೆಯಿಂದ ಜ್ಯೋತಿಪ್ರವಾಹ ಚಿಮ್ಮಿ ಹರಿದು ಭೂಮ್ಯಂತರಿಕ್ಷಗಳನು ತುಂಬಿ ತುಳುಕಿ ದಿಗ್ದಿಗಂತ ವ್ಯಾಪಿಯಾಗುವುದು, ಓ ಎನ್ನ ಜೀವನ ದೇವತೆ.