ಮೇಘರಾಜನು ಭೂಮಿದೇವಿಯ ಆಹ್ವಾನವನು ಸ್ವೀಕರಿಸಿದ್ದಾನೆ.

ಹೊಸ ಮಳೆಹನಿಗಳ ಹೆಜ್ಜೆಸಪ್ಪುಳವನಾಲಿಸಿ, ದೂರದಿಂದೈತಂದ ಕೆಳೆಯರನೆದುರು ಗೊಳಲೆಂದು ಕುತೂಹಲದಿಂದ ತಲೆದೋರಿದ ಹೊಸ ಹಸುರಿನಲಿ ತುಳುಕುತಿದೆ ಜೀವರಸ.

ಎಳಬಿಸಿಲಿನಲಿ ಹೊಳೆವ ಹಿಮಮಣಿಗಳು ತಳಿರ ತುದಿಯಲಿ ಸಿಲ್ಕಿ ಕಂಪಿಸುತ್ತಿವೆ.

ಕೊಳಕೆ ಕಲ್ಲೆಸೆದಂತೆ ತೇನೆ ಹಕ್ಕಿಯ ಕೂಗು ಮೌನವನು ಮಿಸಿಯುತಿದೆ.

ಬಯಲ ಪೊದೆಯಲಿ ಸುಳಿವೆಲರಿನಲಿ ಬಳುಕುತಿಹ ಜೇಡನ ಬಲೆಯಲ್ಲಿ ಸೆರೆಬಿದ್ದ ಹನಿಗಳು ಮಿರುಗುತಿವೆ ಕಿರುನಗೆಯ ಚೆಲ್ಲಿ.

ಮೂಡಣಾಗಸದ ನೀಲಾಂಗಣದಿ ಬೆಳ್ಮುಗಿಲು ರಂಗವಲ್ಲಿಯನಿಕ್ಕಿದೆ.

ಈ ಸೊಗದ ಬೆಳಗಿನಲಿ ಬಯಲಿನ ಹಸುರುಹಾಸುಗೆಯ ಮೇಲೊರಗಿರುವ ದೀರ್ಘತರುಛಾಯೆಯಲಿ ಕುಳಿತು ನಿನ್ನೊಡನೆ ನಾನು ಗಳಹುತಿಹುದೇನು?

ನನ್ನ ನುಡಿಗೆ ಅರ್ಥವೇನೊಂದಿಲ್ಲ; ಅದರಿಂದ ನೀನು ತಿಳಿಯಬೇಕಾದುದೇನೊಂದಿಲ್ಲ. ಆದರೂ ನೀನು ಕಿವಿಗೊಟ್ಟು ಕೇಳುತಿರುವೆ; ಅರ್ಥವಾದಂತೆ ಕಿರುನಗೆಯ ಬೀರುತಿರುವೆ.

ಏಕೆನೆ, ನಿನಗೆನ್ನ ತೊದಲುಮಾತಿನಲಿ ಬಹು ಪ್ರೀತಿ, ಓ ನನ್ನ ಪ್ರೇಮಮೂರ್ತಿ.