ದಿವಾರಾತ್ರಿಗಳ ಆಲಿಂಗನ ಸಮಯದ ದೀನ ಪ್ರದೋಷ ಜ್ಯೋತಿ ನಿರ್ಜನ ನಿಕುಂಜಗಳ ಮೇಲೆ ಮಾಯೆಯ ಚುಂಬನದಂತೆ ಪವಡಿಸಿದೆ.

ಆಷಾಢಮಾಸದ ಅಧೌತ ಗಗನತಲದಲಿ ನೀಲ ಗಜೋಪಮ ಸಜಲ ಜಲಧರಗಳು ದುರ್ದಮ್ಯಧೀರತೆಯಿಂದ ಸಂಚರಿಸುತ್ತಿವೆ.

ಕ್ಷುದ್ರ ಶೈಲಾಗ್ರದಲಿ ಕುಳಿತೆನ್ನ ಹೃದಯ ಆವುದೋ ಒಂದು ಅವರ್ಣನೀಯ ಲೋಲುಪತೆಯಿಂದ ದಿಗಂತವನೇ ಎವೆಯಿಕ್ಕದೆ ನಿರೀಕ್ಷಿಸುತ್ತಿದೆ.

ಸ್ವರ್ಗ ಮರ್ತ್ಯಂಗಳ ಆಲಿಂಗನ ಸ್ಥಾನವಾದ ದಿಗಂತವು ಸಹಸ್ರ ರಹಸ್ಯ ಗರ್ಭಧಾರಿಯಾಗಿ ಸತ್ಯಮಿಥ್ಯೆಗಳ ನಡುವೆ ಬೆಳೆದಿರುವ ಅನಂತ ಮಾಯಾ ರೇಖೆಯಂತೆ ಸುದೀರ್ಘಭೂಮವಾಗಿದೆ.

ಬಗೆ ಕೋರಿದರೂ ಕೈಗೆ ಬಾರದಿಹ ನೂರಾರು ಸವಿಗನಸುಗಳು ದಿಗಂತದ ಹಿಂದುಗಡೆ ಮೈಗರೆದು ನಿಂತು ಕೈ ಬೀಸಿ ಕರೆಯುವಂತೆ ತೋರುತಿದೆ.

ಓ ಎನ್ನ ಜೀವದ ಚಿರಮೋಹದ ದಿಗಂತವೇ, ನಿನ್ನ ರಮಣೀಯ ನಗ್ನ ಶೂನ್ಯತೆಯ ಅಂತರಾಳದಲಿ ಹುದುಗಿರುವ ಕಮನೀಯ ಚಿರಪೂರ್ಣತೆ ನನ್ನನು ಸರ್ವದಾ ಮೋಹಿಸಿ ಕರೆಯುತ್ತಿದೆ; ನಿನ್ನಾ ಅತೀತದ ಆಕರ್ಷಣೆಗೆ ಸೆರೆಯಾಗಿ ಶರಣುಹೋದ ನಾನು ಉತ್ಕಂಠಭಾವದಿಂದ ಕಂಬನಿದುಂಬಿ ಕಾತರನಾಗಿರುವೆ.

ಏಕೆನೆ, ನೀನು ದಿಗಂತದಂತೆಯೆ ಸಹಸ್ರ ರಹಸ್ಯ ಪೂರ್ಣ ಮಾಯಾವಿ.