ಹೊಳೆವ ಚಿನ್ನದ ಗಿಂಡಿಯನು ಕೈಲಾಂತು ಬಾನ ಕರೆಯಲಿ ನಿಂತು ನಲಿಯುವ ಮೂಡಣದ ದೆಸೆವೆಣ್ಣು, ಮೆಲ್ಲನೆಚ್ಚರುವ ತಿರೆವೆಣ್ಣಿನ ಹಸುರುಡೆಯ ಮೇಲೆ ಚಿಮುಕಿಸುತ್ತಿಹಳು ಹೊನ್ನೀರಿನೋಕುಳಿಯ. ಇಬ್ಬನಿಕೋದ ನೆಲದ ಹಸುರು ತಣ್ಣನೆ ತೀಡುವ ತಂಗಾಳಿಯಲ್ಲಿ ಅತ್ತ ಇತ್ತ ಒಲೆಯುತ್ತ ಹೊಂಬಿಸಿಲಲಿ ಜರತಾರಿಯಂತೆ ಮಿರುಗುತ್ತಿದೆ.

ಹಸುರ್‌ತಳಿರು ಮುದ್ದೆಮುದ್ದೆ ಕಿಕ್ಕಿರಿದ ಮರಗಳಲ್ಲಿ ಹುದುಗಿಕೊಂಡು ಹುಚ್ಚುಹಿಡಿದ ಕೋಗಿಲೆಗಳು ಹುಚ್ಚೆಲ್ಲ ಹಾಡಾಗಿ ಹರಿಯುವಂತೆ ಇಂಚರ ಗೈಯುತಿವೆ. ಕೋಗಿಲೆಗಳ ಇನಿಗೊರಲಿಂದ ಕಾಮನ ಬಿಲ್ಲುಗಳು ಹೊರ ಹೊಮ್ಮುತಿವೆ. ಕಿವಿ ಕಣ್ಣಾಗುತಿದೆ; ದನಿ ಬಣ್ಣವಾಗುತಿದೆ. ಭೂಮಿ ಆಕಾಶಗಳು ರೋಮಹರ್ಷಣದಿ ನಲಿಯುತ್ತಿವೆ.

ಮಳೆಯಿಂದ ತಿಳಿಯಾದ ಆಷಾಢದ ವಾಯುಮಂಡಲದಲ್ಲಿ ನೀರೊಡಲ ಮೋಡಗಳು ವಿಕಟಾಕಾರವಾಗಿ ಸುತ್ತುತ್ತಿವೆ. ಮಾಡಿದ ಮಾಡುವ ಕೆಲಸಗಳ ನಡುವೆ ಬೇಸರ ಕಳೆಯಲು ನಿಲ್ಲುವ ಕೆಲಸಗಾರನಂತೆ ಸುಮ್ಮನೆ ಕನಸಿನಲಿ ತೇಲುತ್ತಿವೆ. ಅವುಗಳಿಗೆ ಎದುರಾಗಿ ದೂರದಲಿ ಬೆಳ್ಳಕ್ಕಿ ಸಾಲ್ಗೊಂಡು ಹಾರುತ್ತಿವೆ, ಮುಕ್ತಿಗೇರುವ ಶುಭ್ರ ಜೀವರುಗಳಂತೆ, ಧವಳಪಂಕ್ತಿಯಲಿ.

ಹಸುರು ನೆಲದಲಿ ಹಾವಿನಂತೆ ಕೊಂಕಿ ಹರಿಯುವ ಕೆಂದೂಳಿಯ ಹೆದ್ದಾರಿಯ ಬಳಿ, ಸಾಲ್ಗೊಂಡು ಬೆಳೆದಿರುವ ಬಿದಿರ್‌ಮಳೆಗಳಲಿ, ನೆರೆದಿದೆ ಹಾಡುವ ಹಕ್ಕಿಗಳ ಪರಿಷತ್ತು. ಅವುಗಳೆಲ್ಲ ತುದಿಮೊದಲಿಲ್ಲದ ಬೇಸರವರಿಯದ ಅನಂತಗಾನದ ಆಲಾಪನೆಯಲ್ಲಿ ತೊಡಗಿವೆ. ಬಯಲ ಹಸುರಿನಲ್ಲಿ ಕುಪ್ಪಳಿಸುತ್ತಿವೆ ಪುರುಳಿಹಕ್ಕಿ.

ತುಂಬಿದ ಕೆರೆಯ ಕೆಮ್ಮಣ್ಣು ಬಣ್ಣದ ನೀರಿನ ಅಲೆಗಳು ಹಸುರಾದ ಅಂಚನು ಅಪ್ಪಳಿಸಿ ಸರಸವಾಡುತಿವೆ. ಬೆಳೆಯುತಿರುವ ಜೋಳದ ಹೊಲಗಳು ಉದಯ ವನಿತೆಯನ್ನು ಕೈಬೀಸಿ ಕರೆಯುತ್ತಿವೆ.

ಸ್ವರ್ಗ ತಾನೀ ಪುಣ್ಯಸುಂದರ ಆಷಾಢ ಸೂರ್ಯೋದಯವನು ಪ್ರಾತಃ ಸೂರ್ಯಬಿಂಬದ ಹೊಂಬಟ್ಟಲಲಿ ತುಂಬಿ ಭೂಮಿಗೆ ನಿವೇದಿಸಿದೆ. ಅದಕ್ಕೆ ಇದರಲ್ಲಿರುವ ಪ್ರೇಮದ ಸಾಕ್ಷಿಯಿದು. ಅದರನುರಾಗದ ಇದರುಪಭೋಗದ ಪ್ರತಿನಿಧಿಯಿದು.

ಇದೋ, ನೀನು ಆಷಾಢ ಸೂರ್ಯೋದಯವನು ಚಿನ್ನದ ತಟ್ಟೆಯಲಿಟ್ಟು ನನಗೆ ದಾನಮಾಡಿರುವಂತೆ, ನಾನು ನನ್ನನು ನನ್ನ ಪ್ರೇಮದಲಿಟ್ಟು ನಿನಗೆ ನಿವೇದಿಸಿಕೊಳ್ಳುವೆ.

ನನ್ನದು ಇದೊಂದೆ ಬಿನ್ನಹ: ನನ್ನನೂ ಒಂದು ಆಷಾಢ ಸೂರ್ಯೋದಯವನ್ನಾಗಿ ಮಾಡಿ ಇನ್ನಾವುದಾದರೊಂದು ಲೋಕದ ಇಂತಹ ರಮಣೀಯ ಪ್ರಾತಃಕಾಲದ ಇಂತಹ ಅತುಲ ಐಶ್ವರ್ಯಕ್ಕೆ ನಿವೇದಿಸುವೆಯಾ?