ಕತ್ತಲೆ ಮುತ್ತಿದೆ. ಮುಗಿಲು ಕವಿದು ಬಾನೆಲ್ಲ ವಿಷಣ್ಣವಾಗಿದೆ. ಎತ್ತ ಕಣ್ದಿಟ್ಟಿಯಟ್ಟಿದರೂ ತಾರೆಯೊಂದರ ಸುಳಿವಿಲ್ಲ.

ತರುಗಳ ತುದಿಯಲ್ಲಿ ಗಾಳಿಯ ಚಿಹ್ನೆಯಿಲ್ಲ. ಮೌನಭಾರದಲಿ ಹೃದಯವೇದುತಿದೆ.

ನಿರ್ಜೀವ ನೀರವತೆ ಮಹಾಭೀಮಶವದಂತೆ ದಿಗಂತದಿಂದ ದಿಗಂತದೆಡೆಗೆ ಹಬ್ಬಿ ಬಿದ್ದಿದೆ.

ವಿಶ್ವವೆಲ್ಲವೂ ಹಿರಿಯ ನಿರಾಶೆಯೊಂದರಂತೆ ನಿರ್ವಿಣ್ಣ ಭಾವದಲಿ ತೂಕಡಿಸುತಿದೆ.

ನೀನೆನ್ನ ಬಳಿಯಿರುವೆ ಎಂಬೊಂದು ಆಲೋಚನೆಯನುಳಿದು ಬೇರೆ ಯಾವ ಸಂಗಾತಿಯೂ ನನಗಿಲ್ಲ.

ನಿನ್ನ ಸಾನ್ನಿಧ್ಯಭಾವದಲಿ ಇನಿತು ಜೀವರಸವಿರುವುದೆಂದು ಹಿಂದಾವಾಗಲೂ ನನಗೆ ಹೊಳೆದಿರಲಿಲ್ಲ.