ಆಕಾಶದ ನೀಲಗಭೀರ ಅನಂತತೆಯನು ನೋಡಿ,

ಸಮುದ್ರದ ಅಪಾರ ಸುನೀಲ ವಿಸ್ತೀರ್ಣವನು ನೋಡಿ,

ಮುಗಿಲವರೆಗೆ ತಲೆಯೆತ್ತಿ ನಿಂತಿರುವ ಪರ್ವತ ಶಿಖರಗಳ ಧೀರ ಪ್ರಶಾಂತ ಸ್ಥೈರ್ಯವನು ನೋಡಿ,

ಸೂರ್ಯ ಚಂದ್ರ ತಾರೆಗಳ ಚಿರಜ್ಯೋತಿಯನು ನೋಡಿ,

ಶ್ರಾವಣ ಸಮೀರಣನ ದುರ್ದಮ್ಯಧೀರತೆಯನು ನೋಡಿ,

ವಸಂತ ವನರಾಜಿಯ ವಿವಿಧ ವಿಚಿತ್ರ ಶತಸಹಸ್ರಸ್ವರ್ಣವರ್ಣಮಯ ಐಶ್ವರವನು ನೋಡಿ,

ಎಲೈ ಕಿರಿಯ ಹೂವೆ, ಬೆದರದಿರು; ಬೆರಗಾಗದಿರು; ನಾಚದಿರು; ಕರುಬದಿರು.

ಏಕೆನೆ, ಯುಗಯುಗಾಂತರಗಳೂ ಅಳೆದು ಪೂರಯಿಸಲರಿಯದಿಹ ಅನಂತಕಾಲ ಮಾತೆ ಅವುಗಳೆಲ್ಲವನು ಹೆತ್ತು ಹೊರೆವಂತೆಯೆ ನಿನ್ನನೂ ಹೆತ್ತು ಹೊರೆಯುತಿಹಳು.

ನೀನೂ ಅನಂತಕಾಲಮಾತೆಯ ಮಹಾಗರ್ಭದಿಂದೊಗೆತಂದ ಕೋಮಲ ಪ್ರಿಯತಮ ಶಿಶು ಎಂಬುದನು ಮರೆಯದಿರು.

ನಿನ್ನಾ ಎಲ್ಲ ಸೋದರರಿಗಾಗಿ ನೀನೈತಂದಿರುವಂತೆ ನಿನಗಾಗಿ ಅವರೆಲ್ಲ ರಾವಿರ್ಭವಿಸಿಹರೆಂಬುದನು ನೆನಹಿನೊಳಿಟ್ಟು ನಿಶ್ಚಿಂತ ನಿರ್ಭರತೆಯಿಂದಿರು, ಓ ಕಿರಿಯ ಹೂವೆ.

ಏಕೆನೆ, ನಾವೆಲ್ಲ ಪರಸ್ಪರೋಪಜೀವಿಗಳು!