ನಿನ್ನ ಕೆಂದುಟಿಯ ಹಿಂದುಗಡೆ ಅಮಿತ ಸಂಖ್ಯೆಯ ಸೂರ್ಯ ಚಂದ್ರೋದಯಗಳ ಅಗಣಿತ ರಹಸ್ಯಗಳು ಹಣ್ಣಾಗಿ ಹುದುಗಿಕೊಂಡಿವೆ.
ನಿನ್ನ ಕಣ್ಗಳ ತಿಳಿಗೊಳದಾಳದಲಿ ನೂರಾರು ಹೇರಾಸೆಗಳ ಮಾಯೆಯ ಮೋಹ ಬೀಡುಬಿಟ್ಟಿದೆ.
ನಿನ್ನ ಮುಂಗುರುಳುಗಳ ಮರೆಯಲ್ಲಿ ವಿಶ್ವಗ್ರಾಸಿಯಾದ ಕದ್ದಿಂಗಳ ಕತ್ತಲೆ ಮನೆಮಾಡಿದೆ.
ನಿನ್ನ ಚೆಂಗೆನ್ನೆಗಳ ಪರ್ಣಶಾಲೆಯಲಿ ಇಂದ್ರಧನು ವರ್ಣಮಯ ವಸಂತ ಮಾಸದ ಮಹಾ ಕುಸುಮಸಮ್ಮೇಲನ ನೆರೆದಿದೆ.
ನಿನ್ನೊಂದು ಕಿರುಗನಸಿನೆದುರಿನಲಿ ಹಿಮಾಲಯ ಮಹಾಶೈಲವೂ ನಾಚಿ ತಲೆಬಾಗಿ ನಿಂತಿದೆ.
ನಿನ್ನೊಂದು ಮೆಲುನಗೆಯ ಶಾಶ್ವತಜ್ಯೋತಿಯ ಮುಂದೆ ಯುಗ ಯುಗಾಂತರ ಸ್ಥಾಯಿಗಳೆಂದು ಹೆಮ್ಮೆಯಿಂದ ಹೊಳೆಯುತಿಹ ಶಶಿಸೂರ್ಯ ತಾರೆಗಳ ದೀಪ್ತಿ ಕ್ಷಣಭಂಗುರವಾಗಿದೆ.
ಏಕೆನೆ, ನೀನು ಚಿರನೂತನ ಸೌಂದರ್ಯಮೂರ್ತಿ.
Leave A Comment