ಭಾದ್ರಪದ ಮಾಸದಲಿ, ಪುಣ್ಯಪ್ರಭಾತದಲಿ, ನಿರ್ಮಲಾಕಾಶದಲಿ, ಬಿಳಿ ಮುಗಿಲ ತೆಳುದೆರೆಯನು ಹೊದೆದು ಮಂಗಳಕರ ಸಾಂತ್ವನಮಯ ನೀಲ ಮಂದಸ್ಮಿತವನು ಬೀರಿ ನೀನೈತಂದೆ.
ಹಸುರು ಪಸಲೆಯಲಿ ಪಸರಿಸಿದ್ದ ಹಸುಳೆಬಿಸಿಲಿನಲಿ ನಾನು ಶಿಶುಲೀಲೆಯನು ಮರೆತು ರುದ್ರಸ್ವಪ್ನಗಳೊಡನೆ ಕರಾಳಲೀಲೆಯಲಿ ತೊಡಗಿದ್ದೆ:
ತಾಯಿಯ ಸೆರೆ, ಮಕ್ಕಳ ಹೊರೆ, ಮುಕ್ತಿಯ ಕರೆ;
ಸೋತು ಹುಡಿಯಲಿ ಬಿದ್ದು ಕಂಬನಿಗರೆವ ಸೋದರರ ಅಸೀಮ ರೋದನ;
ಗೆದ್ದ ಹೆಮ್ಮೆಯಲಿ ಮಾನವನಾತ್ಮದ ಪಾವನತೆಯನೆ ಧಿಕ್ಕರಿಸಿ ನಲಿವವರ ರಕ್ತಪದ ಚಿಹ್ನೆ;
ಮತರಾಹು ಹಿಡಿದವರ ಅಂಧಶ್ರದ್ಧೆಯ ಕರ್ಕಶ ಪಾಪಮಯ ಶಂಖಧ್ವನಿ;
ದಾರಿದ್ರ್ಯದಲಿ ನೊಂದವರ ಗೋಳು;
ಧನವಂತರ ನಿಷ್ಕರುಣ ಅಟ್ಟಹಾಸ;
ಈ ಎಲ್ಲ ಕನಸುಗಳ ಕಾಣುತಿದ್ದೆ!
ನೀನೈತಂದೆ; ಬೆಚ್ಚಿಬಿದ್ದು ಕಣ್ದೆರೆದೆದ್ದೆ.
ನಿನ್ನ ಮುಗುಳುನಗೆಯ ಹೊನಲಿನಲಿ ನನ್ನ ಕರಿಗನಸುಗಳೆಲ್ಲ ಮುಳುಗಿ ಕರಗಿ ತೇಲಿಹೋದುವು.
ಅರ್ಥಪರಿಪೂರ್ಣ ಅನಿರ್ವಚನೀಯ ಅನಂತತೆಯಲ್ಲಿ ಬಿರಿದ ಬಬ್ಬುಳಿಗಳಂತೆ ಮಾಯವಾದುವು!
ಆದರೇನು?
ಸರೂಪವಾಗಿದ್ದ ಎನ್ನ ವಿಷಾದ ಅರೂಪವಾಗಿ ಮತ್ತೂ ಭಯಾನಕವಾಗಿದೆ!
ನಾನರಿಯೆನೇ, ನಿನ್ನ ಆ ಮಂದಸ್ಮಿತ ಈ ಸಸ್ಯಶ್ಯಾಮಲಾ ವಸುಂಧರೆಯಂತೆ ಅಗ್ನಿಗರ್ಭಿತವಾದುದೆಂದು?
Leave A Comment