ಸತ್ಯಮಿಥ್ಯೆಗಳ ಕದನದಲಿ ಸತ್ಯಕ್ಕೆ ಜಯವಾಗಲೆಂದು ಹರಸಿ ಹಾರೈಸಿದರೂ ಮಿಥ್ಯೆಯ ಪಕ್ಷದಲ್ಲಿ ನಿಂತು ಹೋರಾಡುತ್ತಿದ್ದೇನೆ.

ಸತ್ಯ ಗೆದ್ದಾಗಲೆಲ್ಲ ಹಿಗ್ಗುತ್ತೇನೆ; ಮಿಥ್ಯೆ ಗೆಲಲು ಕುಗ್ಗುತ್ತೇನೆ.

ಆದರೂ ಸತ್ಯದ ಗೆಲವಿನ ಗಾಂಭೀರ್ಯಕಿಂತಲೂ ಮಿಥ್ಯೆಗೆ ಸೋಲುವ ಮಾಧುರ್ಯವೆ ಮಧುರತರವಾಗಿದೆ.

ಓ ಸತ್ಯಮೂರ್ತಿ, ಮಿಥ್ಯೆಯ ಮೋಹದ ಬಣ್ಣದ ಬುದ್ಬುದ ಸಿಡಿದೊಡೆಯಲಿ! ಸತ್ಯದ ಶೂನ್ಯತೆಗೆ ಸರ್ವಸ್ವವಾಗಲಿ!