ನಿನ್ನ ನೆನೆಯಲು ಬಗೆ ಹಿಗ್ಗಿ ಹಾರುತ್ತದೆ; ಸುಗ್ಗಿಯ ಕನಸು ಕಂಡು ಮಾಗಿಯ ಮರವು ಬರಲಿರುವ ಸಂತಸಕೆ ನಡನಡ ನಡುಗುವಂತೆ, ನನ್ನ ಮೈಯೆಲ್ಲ ವಿಕಂಪಿಸುತ್ತದೆ.

ನೀನೆನ್ನ ಬಳಿ ಬರಲು ನನ್ನೆದೆ ತುಂಬಿ ತುಳುಕುತ್ತದೆ. ಹೊಸ ಮಳೆಯ ನೀರು ಬರಲು ಕಾಡಿನ ತೊರೆ ಉಕ್ಕಿ ಮೊರೆದು ಹಾರಿ ಜಾರಿ ಕ್ರೀಡಾಶೀಲ ಉನ್ಮತ್ತ ತರಂಗಗಳಿಂದ ಹಸುರುದಡವನಪ್ಪಳಿಸುವಂತೆ, ಭಾವಯಮುನೆ ಹೃದಯ ಬೃಂದಾವನವನು ಬಡಿದು ನಡುಗಿಸುತ್ತದೆ,- ನೀನೆನ್ನ ಬಳಿಬರಲು.

ನೀನೆನ್ನನಾಲಿಂಗಿಸಿ ಚುಂಬಿಸಲು ನಿನ್ನ ಚೆಂದುಟಿಯ ಸುಖ ಕೋಮಲ ಮೃದು ಮಧುರ ಸ್ಪರ್ಶನಕೆ ನನ್ನ ಅಹಂಕಾರ ಕರಗಿ ಲಯವಾಗುತ್ತದೆ ನಿನ್ನಾತ್ಮದಲಿ ತಲ್ಲಿನವಾಗಿ- ಬಾಂದಳದ ಮುಗಿಲಮನೆಯಿಂದೈತಂದು ತಿರೆವೆಣ್ಣಿನ ಸಿರಿಗೆನ್ನೆಗೆ ಮುತ್ತುಕೊಡುವ ಆಲಿಕಲ್ಲಿನಂತೆ!