ನೀನೈತರುವೆ ಎಂದು ಕಾತರದಿ ಕಾದೆ. ಹಾದಿಯ ತುದಿಯಲಿ ನೀ ಬರುವುದನು ಕಾಣುವೆನೆಂದು ಸಲಸಲವೂ ಎಲೆವನೆಯ ಹೊರಗೆ ಹೋದೆ.

ಕೊಂಕು ಕೊಂಕಾಗಿದ್ದ ಕೆಂಪಾದ ಹಾದಿ ದಿಗಂತದಲಿ ಕಣ್ಮರೆಯಾಗಿತ್ತು. ನಿರ್ಜನವಾಗಿತ್ತು.

ನಿಡುಸುಯ್ದು ಹಿಂತಿರುಗಿ ಬಂದು ಚಿಂತೆಯಲಿ ಮುಳುಗಿದೆ.

ಬೇಸಗೆಯ ಬಿಸಿಲಿನಾಸರಕೆ ಬೇಸತ್ತು ಮೌನಭಾರದಿಂದೆದೆ ಕುಸಿಯೆ ವಿರಹಯಾತನೆಯ ಮರೆಯಲೋಸುಗವೆ ಮಲಗಿ ನಿದ್ರಿಸಲೆಳಸಿದೆ.

ಎದೆಯ ಉಬ್ಬೆಗದಲಿ ನಿದ್ದೆಬಾರದೆ ಇರಲು, ಎಲೆಮನೆಯ ಹೊರಗಡೆ ಸುಳಿಗಾಳಿಯ ನರ್ತನಕೆ ನರ್ತಿಸುವ ತರಗೆಲೆಗಳ ನಾದಕ್ಕೆ ಮರುಳಾಗಿ ಮರಳಿ ಮರಳಿ ತಲೆಯೆತ್ತಿ ಈಕ್ಷಿಸಿದೆ.

ಅನಂತ ನಿರೀಕ್ಷೆಯೆ ತಪಸ್ಸಾಯಿತೆನಗೆ!