ಬಾ, ನನ್ನ ಮಧುರ ಮೋಹನ ಮೂರ್ತಿ! ಹೇ ಅನಂತ ನಿರೀಕ್ಷೆಯ ತಪಃ ಫಲಮೂರ್ತಿ!

ನನ್ನ ಬಳಿ ಮೈಸೋಂಕಿನಲಿ ಕುಳಿತುಕೊ. ನಿರಾಕಾರತೆಯ, ಅನಿಶ್ಚಯತೆಯ, ಸುದೂರತೆಯ ಸಂದೇಹವನು ಸಂಹರಿಸು. ನಿನ್ನನಪ್ಪಿ ನೀನಿರುವುದನು ನಂಬಿ ನಲಿಯುವೆನು.

ನನ್ನನಾಲಿಂಗಿಸು; ಚುಂಬಿಸು; ನನ್ನನಿಲ್ಲಗೈ!

ಅಯ್ಯೊ, ಈ ಬೇಸರದ ಏಕಾಂತವೂ ಸಾಕೆನೆಗೆ; ಈ ಮೌನದ ಪೀಡನೆಯೂ ಸಾಕೆನಗೆ.

ನಿನ್ನ ಚುಂಬನ ಆಲಿಂಗನಗಳಿಂದ ನನ್ನ ಏಕಾಂತವಳಿದು ಹೋಗಲಿ! ನಿನ್ನೊಲುಮೆಯ ಸವಿಮಾತುಗಳಿಂದ ಈ ಮಹಾಮೌನ ಸಿಡಿದೊಡೆದು ಅಸಂಖ್ಯ ಸುಮಧುರ ಸ್ವರಗಳಾಗಲಿ!