ತೇಲಿಬಿಡು ನನ್ನ ಜೀವನಾವೆಯನು ನಿನ್ನ ಪ್ರೇಮಸ್ರೋತದಲಿ.

ಶಾಂತಿವಾರಧಿಯ ಸನ್ನಿಧಿಗೆ ಹೋದರದು ಹೋಗಲಿ; ಹೋಗದಿದ್ದರೆ ಬಿಡಲಿ.

ಅನಂತಕಾಲವೂ ನಿನ್ನ ಹೃದಯದ ಭಾವತರಂಗ ಮಾಲೆಯ ಚುಂಬನಗಳಾನಂದವನು ಅನುಭವಿಸಲಿ.

ನಿನ್ನ ನಲ್ಮೆಯ ತುಂತುರು ನನ್ನ ಕೆನ್ನೆ ತುಟಿಗಳನು ತೋಯಿಸಲಿ.

ನಿನ್ನ ತೆರೆನಗೆಯ ಲೀಲೆ ನನ್ನ ಮೊಗದ ಮೇಲೆ ತೆರೆ ತೆರೆಯಾಗಿ ನೆಗೆಯಲಿ!

ಯುಗಯುಗ ಮುಗಿದರೂ ನಮ್ಮಾಟ ಮುಗಿಯದಿರಲಿ.

ಅನಂತ ಪ್ರೇಮಸ್ರೋತವಾಗಿರು ನೀನು; ನಿನ್ನೆದೆಯ ಮೇಲೆ ನಲಿದಾಡುವ ಜೀವನಾವೆಯಾಗಿರುವೆ ನಾನು!