ಸನಾತನ ಅನಂತಗಾಯಕನೆ, ನಿನ್ನ ಗಾನವು ನಾನು. ಎನಿತೆನಿತೊ ಸಾರಿ, ಆವಾವ ಲೋಕಗಳಲ್ಲಿ, ಆವಾವ ರೀತಿಗಳಲ್ಲಿ ನೀನು ನನ್ನನು ಹಾಡಿದೆ; ದಣಿಯದೆ ಮರಳಿ ಮರಳಿ ಹಾಡುತ್ತಿರುವೆ!

ಸೂರ್ಯಚಂದ್ರರು ತಮ್ಮ ಜನನ ಕಾಲದಲಿ ಈ ಗಾನವನು ಕೇಳಿದರು. ನಕ್ಷತ್ರಗಳಿಗೆ ಇದುವೆ ಜೋಗುಳವಾಯಿತು. ಸಮಸ್ತ ವಿಶ್ವಕ್ಕು ಇದುವೆ ಚರಮಗೀತೆಯಾಗುವುದು.

ಮುಕ್ತಿಯಲ್ಲಿಯೂ ಇದೇ ಗಾನ, ಸ್ವರ್ಗದಲ್ಲಿಯೂ ಇದೇ ಗಾನ, ಭೂಮಿಯಲ್ಲಿಯೂ ಇದೇ ಗಾನ. ನೀನು ಹೋದೆಡೆಯಲ್ಲಿ, ನೀನು ಬಂದೆಡೆಯಲ್ಲಿ, ನೀನು ಇರುವೆಡೆಯಲ್ಲಿ ಎಲ್ಲಿಯೂ ಯಾವಾಗಲೂ ಇದೇ ಅಮರಗಾನ: ಸನಾತನ ಅನಂತಗಾಯಕನ ಚಿರನೂತನ ಅನಾದಿಗಾನ!

ಗಾನವಿಲ್ಲದೆ ಗಾಯಕನಿಲ್ಲ; ಗಾಯಕನಿಲ್ಲದೆ ಗಾನವಿಲ್ಲ. ನೀನು ಸರ್ವದಾ ಗಾನಮಾಡುತ್ತಿರುವುದು ಸೊನ್ನೆಯಾದೇನೆಂಬ ಬೆದರಿಕೆಯಿಂದಲೇನೊ?