ದಾರಿಯ ಬಳಿ ಹುಲ್ಲುಹಸುರಿನ ಮೇಲೆ ಕುಳಿತೆ, ನಿನ್ನ ಬರವನೆ ಹಾರೈಸಿ.

ಬಣ್ಣ ಬಣ್ಣದ ಬಟ್ಟೆಯನುಟ್ಟು, ಮುಖದಲ್ಲಿ ಮೃದುಹಾಸವನೆ ತೊಟ್ಟು ಸಂಧ್ಯಾಸುಂದರಿ ಪಶ್ಚಿಮ ಗಗನ ವೇದಿಕೆಯಲ್ಲಿ ಹಕ್ಕಿಗಳಿಂಚರಕೆ ನೃತ್ಯಲಾಸ್ಯವನಾಡಿ ಮೆಲ್ಲಮೆಲ್ಲನೆ ಅನಂತದಿಗಂತ ವಿಲೀನೆಯಾದಳು.

ನಿಶಾರಮಣಿಯ ವಿಶ್ರಾಂತಿಚುಂಬನ ಶ್ರಾಂತವಸುಂಧರೆಯ ಪಲ್ಲವಾಧರಗಳ ಸುಮಶಯ್ಯೆಯ ಮೇಲೆ ಮೃದುವಾಗಿ ಪವಡಿಸತೊಡಗಿತು.

ಸೌಂದರ್ಯವನು ಕಂಡ ವೈರಾಗ್ಯದ ಹೃದಯದಲಿ ಒಲ್ಮೆಯ ಹೊಂಗಿಡಿ ಹೊಳೆಯುವಂತೆ ಬಾನಿನ ಕತ್ತಲು ತುಂಬಿದ ಬಿತ್ತರದೆದೆಯಲಿ ತಾರೆಯೊಂದರಳಿ ಎವೆಯಿಕ್ಕಲಾರಂಭಿಸಿತು.

ನೀನು ನಿನ್ನಿತರ ಜೊತೆಗಾರರೊಡನೆ ಲೀಲಾನಿಮಗ್ನನಾಗಿದ್ದೆ.

ನೀನೆನ್ನ ಮರೆತೆಯೋ ಎಂಬ ಆಶಂಕೆಯಲಿ ಎದೆ ತಳಮಳಿಸಿತ್ತು.

ಆದರೆ ತುಸು ಹೊತ್ತಿನ ಮೇಲೆ ಬೆಂಗಡೆಯಿಂದೈತಂದು ನೀನೆನ್ನ ಕಣ್ಣು ಮುಚ್ಚಲು, ಕತ್ತಲೆಯಳಿದುಹೋಯ್ತು; ಬೆಳ್ಳನೆ ಬೆಳಗಾಯ್ತು!