ನೀನೆನ್ನ ಬಳಿಬಂದು ಕೆಳೆತನದ ನೇಹದಲಿ ನನ್ನೊಡನಾಡಿದಂದು ನಾ ನಿನ್ನ ಮಹಿಮೆಯನು ತಿಳಿಯದಾದೆ.

ನೀನೆನ್ನನಪ್ಪಿ ಮುದ್ದಿಸಲು ತನುಪುಳಕದಾನಂದದಲಿ ನನ್ನಂತೆಯೇ ನೀನೆಂದು ತಿಳಿದುಬಿಟ್ಟೆ.

ಬೆಟ್ಟ ಕಣಿವೆಗಳಲ್ಲಿ ಹೊಲಗದ್ದೆಗಳಲಿ ಕೆರೆ ತೊರೆಗಳ ಬಳಿ ನೀನೆನ್ನ ಕೈಹಿಡಿದು ಕರೆದೊಯ್ದು ನನ್ನ ಕಿವಿಗಳಲಿ ಕನಸುಗಳನುಸುರಲು, ಕೇಳಿ, ಮಂಕು ಕವಿದವನಂತೆ ಸುಮ್ಮನಿದ್ದೆ.

ನಿನ್ನ ಪರಿಚಯ ಹೆಚ್ಚಿದಂತೆಲ್ಲ ನನ್ನೊಲುಮೆಗೆ ನೀನು ದಾಸನಾಗಿರುವೆ ಎಂಬ ಹೆಮ್ಮೆಯಲಿ ನಾನುದಾಸೀನನಾದೆ.

ನೀನೆನ್ನ ಬಿಟ್ಟಿರಲಾರೆ ಎಂಬ ಗರ್ವದಿಂದುಬ್ಬಿದೆ.

ಆದರೇನಿದು, ಓ ನನ್ನ ಜೀವೇಶ? ದಿನ ಕಳೆದಂತೆಲ್ಲ ದೂರ ದೂರ ದೂರ ಹೋಗಿ ನೀನಿಂದು ದಿಗಂತದಲಿ ನಿಂತಿರುವೆ.

ನನ್ನ ಗರ್ವ ತಲೆಬಾಗಿದೆ. ನನ್ನ ಬಿಂಕ ಹುಡಿಯಲ್ಲಿ ಹೊರಳುತ್ತಿದೆ. ದಿಗಂತದಲಿ ನಿಂತಿರುವ ನೀನು ಕಣ್ಮರೆಯಾಗುವೆಯೋ ಎಂದು ಎದೆ ಬೆದರಿ ಬೇಯುತ್ತಿದೆ.

ಮನ್ನಿಸೆನ್ನನು, ದೊರೆಯೆ, ಮತ್ತೊಮ್ಮೆ ಬಳಿಗೆ ಬಾ. ನಾ ನಿನ್ನ ಕಾಲಡಿಯ ನೆಳಲಾಗಿ ನಿನ್ನನಾಲಿಂಗಿಸುವೆ.