ನನಸಿನಲಿ ದೇಹದಲಿ ನಾ ನಿನ್ನ ಬಳಿಗೆ ಬರಲಾರೆ. ಮನಸಿನಲಿ ಕನಸಿನಲಿ ನಾನೈತರುವೆ, ಓ ನನ್ನ ನಲ್ಮೆಮೂರುತಿ!

ದೇಹದಲಿ ಬರಲಾರೆ: ನೂರು ಕೋಟೆಗಳಿವೆ; ನೂರು ಕೋಟಲೆಗಳಿವೆ. ಹಾದಿಯಲಿ ಬೆಟ್ಟ ಹೊಳೆ ಮರುಭೂಮಿಗಳಿವೆ. ಬೆಟ್ಟವನೇರಲಾರೆ, ಹೊಳೆಯನೀಜಲಾರೆ; ಮರುಭೂಮಿಯನು ಉತ್ತರಿಸಲಾರೆ.

ಮನ್ನಿಸೆನ್ನನು, ಪ್ರಿಯನೆ; ದೌರ್ಬಲ್ಯಮೂರ್ತಿ ನಾನು.

ಕನಸಿನಲಿ ನನ್ನ ರಾಜ್ಯಕೆ ನಾನೆ ಚಕ್ರವರ್ತಿ. ಅಲ್ಲಿ ನಿರಂಕುಶಪ್ರಭು ನಾನು. ಅಲ್ಲಿ ದೃಷ್ಟಿಯಂತೆಯೆ ಸೃಷ್ಟಿ.

ಕೋಟೆಕೋಟಲೆಗಳೆಲ್ಲ ಅಲ್ಲಿ ಚೂರಾಗುವುವು. ಬೆಟ್ಟ ಹೊಳೆ ಮರುಭೂಮಿಗಳೆಲ್ಲ ದಾರಿಯಾಗುವುವು. ಒಂದು ನಿಮಿಷಕೆ ನಿನ್ನ ನಾ ಸೇರಿ ನಿನ್ನ ತಕ್ಕೆಯೊಳಗಾಗುವೆನು.

ಅಲ್ಲಿ ನೋಡುವರಿಲ್ಲ; ಅಲ್ಲಿ ಕರುಬುವರಿಲ್ಲ. ನಾಲ್ಕು ಕಣ್ಗಳ ಹೊರತು ಬೇರೆ ಕಣ್ಗಳೂ ಅಲ್ಲಿಲ್ಲ.

ಕನಸು ಸ್ವಾತಂತ್ರ್ಯಕೆ ತವರೂರು.

ಓ ನನ್ನ ಚುಂಬನಾಲಿಂಗನ ಮೂರ್ತಿ, ಕನಸಾದರೇನು? ನನಸಾದರೇನು? ಬಂದರಾಯಿತು ನಿನ್ನ ಬಳಿಗಾನು!

ಕನಸಿನೊಳಗಾದರೂ ನನ್ನೆದೆಗೆ ಬಾ ನೀನು!