ಮುಳುಗುವ ಸೂರ್ಯನ ಮಾಗಿದ ಕಾಂತಿ ಕಾಡಿನ ಹಸುರೆಲೆಗಳನ್ನು ಅಪ್ಪಿ ಮುದ್ದಿಸುತ್ತಿದೆ. ಬೈಗಿನ ಕೆಂಪು ಬಾನಿನೆಡೆಗೆ ತಲೆಯೆತ್ತಿ ನಿಂತಿರುವ ಬನಗಳ ಮಾಲೆಯನ್ನು ತೋಯಿಸಿ ಮೀಯಿಸುತ್ತಿದೆ. ಹಬ್ಬಿದ ಹೊಂಬೆಳಗಿನಲ್ಲಿ ನಾಡೆಲ್ಲ ಮನೋಹರವಾಗಿದೆ. ಮೊರೆಯುತ್ತ ಹರಿಯುವ ತೊರೆಯ ಬಳಿಯ ಕರಿಯ ಬಂಡೆಯ ಮೇಲೆ ಕುಳಿತ ನಾನು ಸೊಬಗಿನ ಮೆರವಣಿಗೆಯನ್ನು ನೋಡಿ ನೋಡಿ ಬೆರಗಾಗಿದ್ದೇನೆ.

ಗೂಡಿಗೆ ಹಾರುವ ಹಕ್ಕಿಗಳ ನೂರಾರು ಹಾಡುಗಳಿಂದ ಸಂಜೆಯ ಗಾಳಿವಟ್ಟೆ ತುಂಬಿತುಳುಕುತ್ತಿದೆ. ಹಾದಿಯ ದೂಳನೆಬ್ಬಿಸಿ ದೊಡ್ಡಿಗೆ ಹೋಗುವ ದನಗಳ ಹಿಂಡು ಕರುಗಳನು ಅಂಬಾ ಎಂದು ಕೂಗಿ ಕರೆಯುತ್ತಿದೆ. ಕಂಬಳಿಯನು ಹೆಗಲಮೇಲೆ ಹಾಕಿಕೊಂಡು ದನಗಾಹಿಗಳು ಮನೆಯೆಡೆಗೆ ಬೇಗ ಬೇಗನೆ ತೆರಳುತ್ತಿದ್ದಾರೆ. ಗೋಧೂಳೀ ಸಮಯವು ನಯನ ಮನೋಜ್ಞವಾಗಿದೆ. ಮಂಜುಳ ನಾದದಿಂದ ಪ್ರವಹಿಸುವ ತರಂಗಿಣಿಯ ತೀರದ ಶಿಲೆಯ ಮೇಲೆ ಕುಳಿತ ನಾನು ಸಂಜೆಯ ದಿಬ್ಬಣವ ನೋಡಿ ನೋಡಿ ಬೆರಗಾಗಿದ್ದೇನೆ.

ಗದ್ದೆಯಿಂದ ಮನೆಗೆ ಹೋಗುವ ನೇಗಿಲಯೋಗಿಗಳು ಹಾದಿಯ ಬಳಿ ಮರುಳನಂತೆ ಕುಳಿತ ನನ್ನನ್ನು ನೋಡಿ ವಿಸ್ಮಿತರಾಗಿದ್ದಾರೆ. ಮೂಡಿಬರುವ ಹುಣ್ಣಿಮೆಯ ತಿಂಗಳನ್ನು ಎದುರುಗೊಳ್ಳಲು ನಾನು ಕಾಯ್ದುಕೊಂಡಿರುವೆನೆಂಬುದನ್ನು ಅವರೆಂತರಿವರು?