ಹೃದಯವನ ತಪಿಸುತಿದೆ ವಿರಹವೈಶಾಖದಲಿ; ಸೊಂಪಿಡಿದ ತರುತಲದಿ ನೆಳಲು ಬರಿದಾಗುತಿದೆ; ಪಕ್ಷಿಗಳು ಗಾನಗೈಯದಿವೆ ತಾಪಮೂರ್ಛೆಗೆ ಸಂದು.
ಭಯಂಕರ ಅಕರ್ಮಾವಸ್ಥೆಯ ಮಹಾಲಸ್ಯವನು ಸಹಿಸಲಾರೆನು ನಾನು.
ಓ, ಚಲಿಸದಿಹ ತರುಲತಾ ಪರ್ಣನಿವಹಕೆ ಚಲನೆಯನು ನೀಡೈ, ಪವನ ಪಾವನ ಮೂರ್ತಿ.
ನನ್ನ ಏಕಾಂತವನು ತೊತ್ತಳದುಳಿ!
ನನ್ನ ಜಡತಪಸ್ಸಿಗೆ ಭಂಗವನು ತಾ.
ತೇಜಃಪೂರ್ಣ ರಸಮಯ ಚೈತನ್ಯವನುದ್ರೇಕಿಸು.
ನನ್ನೊಡನಾಡು ಬಾ; ನನ್ನೊಡನೋಡು ಬಾ; ನನ್ನೊಡನೆ ಕೂಡು ಬಾ, ಓ ನನ್ನ ಸರಸ ಸುಂದರ ಮೂರ್ತಿ!
Leave A Comment