ಶ್ರಾವಣ ಮಾಸದ ಪ್ರಾತಃಕಾಲದಲಿ ಕೊಟಡಿಯಲಿ ಕುಳಿತಾನು ಲೋಕದ ಶೋಕದ ಚಿಂತೆಯಲಿ ಮುಳುಗಿ ಮರುಗುತಿದ್ದೆ.

ಮುಂದೆ ಗತಿ ಏನೆಂದು ನಿರಾಶೆಯಲಿ ಕೊರಗುತಿದ್ದೆ.

ಸತ್ಯ ಧರ್ಮಗಳಿಗೆ ಸಲಸಲವೂ ಬಂದೊದಗುವ ಪರಾಜಯವನು ಕುರಿತು,

ರಾಷ್ಟ್ರ ರಾಷ್ಟ್ರಗಳ ಪರಸ್ಪರ ದ್ವೇಷಾಸೂಯೆಗಳನು ಕುರಿತು,

ಶಾಂತಿಸಂಧಾನಗಳ ಹಿಂದೆ ಹುದುಗಿ ಕಣ್ಣು ಮಿಟುಕಿಸುತಿರುವ ಕ್ರಾಂತಿ ಸಮರಗಳ ದುರಭಿಸಂಧಿಯನು ಕುರಿತು,

ಗೆದ್ದವರು ಸೋತವರ ಮೇಲೆ ನಡೆಸುತ್ತಿರುವ ಅತ್ಯಾಚಾರಗಳನು ಕುರಿತು,

ಜೀವನದ ನೂರಾರು ದುರ್ಭೇದ್ಯ ಸಮಸ್ಯೆಗಳನು ಕುರಿತು,

ಮುಂದೆ ಗತಿ ಏನೆಂದು ನಿರಾಶೆಯಲಿ ಕೊರಗುತಿದ್ದೆ.

ಇದ್ದಕಿದ್ದಂತೆ ನಿಡುಸುಯ್ದು ಮೇಲೆದ್ದೆ.

ಗವಾಕ್ಷದಾಚೆಗೆ ದೃಷ್ಟಿಯನಟ್ಟಿ ನೋಡಲು, ಅಲ್ಲಿ ಯಾವ ಶೋಕದ ಛಾಯೆಯೂ ಕಾಣಿಸಲಿಲ್ಲ. ಎಲ್ಲವೂ ಸುಖ ಶಾಂತಿ ಪೂರ್ಣವಾಗಿತ್ತು.

ನನ್ನ ಚಿಂತೆಗೆ ನಾನೆ ನಾಚಿದೆ.

ಹೊರಗೆ ಹಸುರು ಬಯಲಿನಲಿ ಇಬ್ಬನಿಗಳ ಮೇಲೆ ಎಳಬಿಸಿಲು ಮುದ್ದಾಗಿ ಮಲಗಿತ್ತು.

ಹೂದೋಟದಲಿ ಗುಬ್ಬಚ್ಚಿಗಳ ಗಾನ ನಿಶ್ಚಿಂತವಾಗಿತ್ತು; ನಿರುದ್ವಿಗ್ನವಾಗಿತ್ತು; ಆನಂದವಾಗಿತ್ತು.

ಕುಸುಮಗಳು ನನ್ನನು ನೋಡಿ ನಗುತಿದ್ದುವು.

ದೂರದಲಿ, ಮರಗಿಡಗಳಲ್ಲಲ್ಲಿ ತುಂಬಿದ್ದ ಹಸುರು ಹೊಲಗಳ ನಡುವೆ, ಚಲಿಸುತಿದ್ದುವು ಬಿಳಿಯ ಚುಕ್ಕಿಗಳೆರಡು!

ಆ ಬಿಳಿಯ ಚುಕ್ಕಿಗಳ ಹಿಂದುಗಡೆ ಕರಿಯ ಚುಕ್ಕಿಯದೊಂದು ಚಲಿಸುತ್ತಿತ್ತು!

ಬಿಳಿಯ ಚುಕ್ಕಿಗಳೆರಡು ಬಿಳಿಯ ಎತ್ತುಗಳು! ನೇಗಿಲನು ಕೈಲಾಂತ ಒಕ್ಕಲಿಗನೆ ಕರಿಯ ಚುಕ್ಕಿ!

ತೂರಿಹೋದುವು ನನ್ನ ಚಿಂತೆಗಳೆಲ್ಲ; ಮಾಯವಾಯಿತು ನನ್ನ ನಿರಾಶೆ!

ಏನೆ ಆಗಲಿ ಜಗಕೆ, ನೀನಿರುವ ಪರ್ಯಂತ ನಮಗೆ ಕೇಡಿಲ್ಲ! ನಿನ್ನ ದರ್ಶನದಿಂದ ನಮ್ಮೆಲ್ಲ ನಿರಾಶೆಗಳೂ ಸಿಡಿದೊಡೆಯುವುವು, ನೀರ ಮೇಲಣ ಗುಳ್ಳೆಗಳಂತೆ!