ಅಜ್ಞಾತ ಮಹಾತ್ಮನೆ, ನಿನಗಿದೋ ನಮಸ್ಕಾರ! ಸಾಷ್ಟಾಂಗ ನಮಸ್ಕಾರ!

ನೀನಾರೆ ಆಗಿರಲಿ, ನೀನೆಲ್ಲಿಯೆ ಇರಲಿ, ನಿನಗಿದೋ ನಮಸ್ಕಾರ! ಸಾಷ್ಟಾಂಗ ನಮಸ್ಕಾರ!

ಯಾವ ದೇಶದವನೋ ನೀನು? ಯಾವ ಜಾತಿಯವನೋ ನೀನು? ಯಾವ ಕರ್ಮದವನೋ ನೀನು? ಯಾವ ಧರ್ಮದವನೋ ನೀನು? ಎಂತಾದರಾಗಿರಯ್ಯಾ ನೀನು, ಹೇ ಅಜ್ಞಾತ ಮಹಾತ್ಮನೆ, ನಿನಗಿದೋ ನಮಸ್ಕಾರ! ಸಾಷ್ಟಾಂಗ ನಮಸ್ಕಾರ!

ಲೋಕದ ಕಣ್ಣಿಗೆ ನೀ ಬೀಳದಿರಬಹುದು. ಲೋಕ ನಿನ್ನನು ಲೆಕ್ಕಿಸದಿರಬಹುದು. ಆದರೆ ಜಗದೀಶನ ಕಣ್ಣನೆಲ್ಲಾ ನೀನೆ ತುಂಬಿರುವೆ! ಆತನ ಎದೆಯನೆಲ್ಲಾ ನೀನೆ ಆವರಿಸಿರುವೆ!

ಯಾರೂ ಕಾಣದ ಯಾರೂ ಕೇಳದ ದೂರದ ಹಳ್ಳಿಯಲಿ ನೀ ಹೊಲೆಯ ನಾಗಿರಬಹುದು;

ಹಗಲಿರುಳೂ ಗೆಯ್ಯುವ ರೈತನಾಗಿರಬಹುದು;

ಬಡಗುಡಿಯಲಿ ಜಗದೀಶನ ದಿನವೂ ಧ್ಯಾನದಿ ಮುಟ್ಟುವ ಪೂಜಕನಾಗಿರಬಹುದು;

ಮಣ್ಣನು ತಟ್ಟಿ ಮಡಕೆಯ ಮಾಡುವ ಕುಂಬಾರನಾಗಿರಬಹುದು;

ಕಮ್ಮಾರನಾಗಿರಬಹುದು; ಚಮ್ಮಾರನಾಗಿರಬಹುದು;

ದೂರದಮೇರಿಕೆಯಲಿ ನೀ ಜಲಗಾರನಾಗಿರಬಹುದು;

ಆಸ್ಟ್ರೇಲಿಯದಲಿ ನೀ ಕೂಲಿಯಾಗಿರಬಹುದು;

ಗಂಗಾ ತೀರದಿ ನೀ ಋಷಿಯಾಗಿರಬಹುದು;

ಲಂಡನ್ನಿನಲಿ ಯಂತ್ರ ನಡೆಯಿಸುವ ಸಾರಥಿಯಾಗಿರಬಹುದು;

ನೀನೇನಾದರೂ ಆಗಿರು, ನೀನಾರಾದರೂ ಆಗಿರು, ನೀನೆಲ್ಲಾದರೂ ಇರು, ಎಂತಾದರೂ ಇರು;

ಅಥವಾ ನೀನಿಲ್ಲದೆ ಮೃತನಾಗಿರು, ಮಣ್ಣಾಗಿರು;

ಅಜ್ಞಾತ ಮಹಾತ್ಮನೆ, ನಿನಗಿದೋ ನಮಸ್ಕಾರ! ಸಾಷ್ಟಾಂಗ ನಮಸ್ಕಾರ! ಉದ್ದಂಡ ನಮಸ್ಕಾರ!