ಬಾ, ಬಳಿಗೆ ಬಾ, ನನ್ನ ಸೌಂದರ್ಯಮೂರ್ತಿ.

ನಿನ್ನನಾಲಿಂಗಿಸುವೆ; ನಿನಗೆ ಮುತ್ತಿಡುವೆ; ನೀನೆ ನಾನಾಗಿ, ನಾನೆ ನೀನಾಗಿ ಒಂದಾಗುವೆ; ಬಾ, ಬಳಿಗೆ ಬಾ, ನನ್ನ ಸೌಂದರ್ಯಮೂರ್ತಿ.

ನೀನಂದು ಶ್ರೀರಾಮನಾದಂದು ಸಿಂಹಾಸನದ ಮೇಲೆ ಕುಳಿತಂದು ನಾ ನಿನ್ನ ಬಳಿಗೆ ಬಂದು ನಿನ್ನ ಮೊಗಕೊಂದು ಮುತ್ತಿಟ್ಟೆ, ಓ ನನ್ನ ಶ್ರೀಮೂರ್ತಿ.

ನೀನಂದು ಲಂಕೆಯಾ ರಣರಂಗದಲಿ ರಾಮಬಾಣದಿ ನೊಂದು ಅಸುದೊರೆಯುತಿದ್ದಂದು ನಾ ನಿನಗೆ ಮುತ್ತಿಟ್ಟೆ, ಓ ನನ್ನ ದುಃಖಮೂರ್ತಿ.

ನೀನಂದು ಕ್ರಿಸ್ತನಾಗಿ ಶಿಲುಬೆಯೇರಿ ನೊಂದು ಬೆಂದು ಸಾಯುವಂದು ನಾ ನಿನಗೆ ಬಿಜ್ಜಣವಿಕ್ಕಿ ತಂದು ತೋಯವನೆರೆದೆ, ಓ ನನ್ನ ಚಿರಸಂಕಟ ಮೂರ್ತಿ.

ನೀನಂದು ಆ ಮಹಾನಗರದಲಿ ಅಜ್ಞಾತ ಭಿಕ್ಷುಕನಾಗಿ ರೋಗಪೀಡಿತನಾಗಿ ತಿರಸ್ಕೃತನಾಗಿ ಮರಣೋನ್ಮುಖನಾಗಿ ಬೀದಿಯಲಿ ಬಿದ್ದು ಹೊರಳಾಡಿದಂದು ನಾ ನಿನ್ನ ಕಣ್ಣೀರನೊರಸಿ ಕೊಳೆತು ನಾರುವ ತುಟಿಗೆ ನನ್ನ ತುಟಿಯಿಟ್ಟೆ, ಓ ನನ್ನ ಚಿರದಾರಿದ್ರ್ಯ ಮೂರ್ತಿ.

ನೂರು ತಾಣದಲಿ, ನೂರು ವೇಷದಲಿ, ನೂರು ಮೇಲ್ಮೆಯಲಿ, ನೂರು ಕೀಳ್ಮೆಯಲಿ, ನೂರಾರು ಕಾಲ ದೇಶಗಳಲಿ ನಾ ನಿನ್ನ ಕೈಬಿಡದೆ ಮೈಬಿಡದೆ ನಿನ್ನನಂಟಿರುವೆ, ಓ ನನ್ನ ಸೌಂದರ್ಯ-ದುಃಖ-ಸಂಕಟ-ದಾರಿದ್ರ್ಯಮೂರ್ತಿ.