ಮರುಭೂಮಿಯಲಿ ಮರುವನದ ತೆರದಿ ನೀನೆನ್ನ ಜೀವನಕೆ ಬಂದಿರುವೆ; ಜೀವನ ಸಂಜೀವನವ ತಂದಿರುವೆ.

ಬಿರುಬಿಸಿಲ ಪರಿಹರಿಸಿ ತಂಪುನೆಳಲಿನ ಸೊಗವ ನೀಡಿರವೆ; ಎದೆಗೆ ತಣ್ಪನೂಡಿರುವೆ.

ಬಳಲಿಕೆಯ ತೊಲಗಿಸುವ ತಂಗಾಳಿಯನು ಬೀಸುತಿಹೆ; ಶಾಶ್ವತ ಪ್ರಣಯವನು ಸೂಸುತಿಹೆ.

ತುಂಬಿ ತುಳುಕುವ ತಿಳಿಗೊಳದ ತಣ್ಣೀರ ನಂಬಿಕೆಯ ಕೊಟ್ಟಿರುವೆ; ಹೃದಯ ಕಮಲದ ಕರ್ಣಿಕೆಯ ಚೆಂದುಟಿಗಳಲಿ ಮುಟ್ಟಿರುವೆ.

ಓ ನನ್ನ ಮುದ್ದಿನ ಮರುವನವೆ, ನಿನ್ನೊಲುಮೆ ದಿಟವಾದರೆ ಈ ಅನಂತ ವಿಸ್ತೃತ ಮರುಭೂಮಿಯ ಪ್ರವಾಸವೂ ನನಗೊಂದು ವಿಹಾರಯಾತ್ರೆ!