ಆತನಿಹನೆಂಬುದಕೆ, ಆತನನು ನಂಬಲ್ಕೆ ಪವಾಡಗಳನರಸುತಿಹೆಯೇನು?

ಅವುದಿದೆ ಪವಾಡವಲ್ಲದುದು? ಅದನೆನಗೆ ತೊರಿದಪೆಯಾ ನೀನು?

ಕಲ್ಲು ರೊಟ್ಟಿಯಾದರೆ ಮಾತ್ರ ಅದು ಪವಾಡವೇನು? ಕಲ್ಲು ಕಲ್ಲಾಗಿರುವುದೇ ಮಹತ್ತರ ಪವಾಡವಲ್ಲವೇನು?

ನಿನ್ನ ಕಾಲಡಿಯಲ್ಲಿ ನೋಡಿದರೆ ಅಲ್ಲಿ ಬೆಳೆದು ನಳನಳಿಸುವೆಳವುಲ್ಲು ಬಹುಕೋಟಿ ಯೋಜನಗಳಾಚೆಯಿಹ ನೀಹಾರಿಕೆಗೂ ಕಡಮೆಯ ಪವಾಡವಲ್ಲ!

ಒಂದು ಹಲ್ಲಿಯ ಕಣ್ಣು ಕಂಭವನೊಡೆದು ಮೂಡಿ ಬರುವ ನೃಸಿಂಹನಿಗೇನು ಕಡಿಮೆಯ ಪವಾಡವಲ್ಲ!

ನಿನ್ನೊಂದು ಕೈಬೆರಳ ಕುಣಿಕೆಯ ರಚನೆ ರವಿಯ ಸುತ್ತಲೂ ಸುತ್ತುತಿಹ ಗ್ರಹಗಳ ಚಲನೆಗಿಂತಲೇನು ಕೀಳಾದ ಪವಾಡವಲ್ಲ!

ಒಂದಿರುವೆಯ ಮುಂದೆ ಲಕ್ಷ ತಾರ್ಕಿಕರ ವಾದ ಹೊಲ್ಲ!