ಯಾರರಿಯದಿಹ ಹೆಬ್ಬನದ ಕೆರೆಯ ಕೆಸರು ಮೂಲೆಯಲಿ ತಾವರೆ ಪೊದಳಿದಂದು, ದೇವಾಲಯದ ಗರ್ಭಗೃಹದಲ್ಲಿ ದೇವದೇವನ ಮುಡಿಯ ಮೇಲೆ ತಾನು ಮಂಡಿಸುವೆನೆಂದು, ಅದು ಕನಸಿನಲ್ಲಿಯೂ ಭಾವಿಸಿರಲಿಲ್ಲ.
ನಿಬಿಡ ತರುಛಾಯೆಯಲಿ ಬನಗತ್ತಲೆಯಲಿ ತುಂಬಿ ತಂಬೆಲರುಗಳೊಡನೆ ಸರಸವಾಡಿ ನಿಶ್ಚಿಂತ ಶಾಂತಿಯಲಿ ತಲ್ಲೀನವಾಗಿತ್ತು.
ತನ್ನಿರವಿಗೆ ತಾನೆ ಮಾರುವೋಗಿತ್ತು. ಮನದಲಿ ಮಹದಾಕಾಂಕ್ಷೆಯ ನೆಳಲೂ ಸುಳಿದಿರಲಿಲ್ಲ.
ಗಿರಿಕಂದರಗಳನೇರಿಳಿಯುತನೀನಲ್ಲಿಗೈತಂದೆ, ಓ ನನ್ನ ಪ್ರೇಮ ವನ ವಿಹಾರಿ!
ಅಲ್ಲಿ ಪರ್ವತವಿತ್ತು; ಹೆಮ್ಮರವಿತ್ತು; ಕೇದಗೆಯಿತ್ತು; ಸಂಪಗೆಯಿತ್ತು. ಆ ಮಹಾ ಸಂಮ್ಮೇಲನದಲಿ ಕೆರೆಯ ಮೂಲೆಯ ಕೆಸರಿನಲಿ ತೇಲುವ ಕಿರುತಾವರೆ ನಿನ್ನ ಕಣ್ಣಿಗೆ ಬಿತ್ತು.
ಅಂದು ಕನಸಾಗಲೊಲ್ಲದುದು ಇಂದು ನನಸಾಗಿದೆ!
ಆ ತಾವರೆಯಿಂದು ದೇವಾಲಯದಲಿ ದೇವದೇವನ ಮುಡಿಯಮೇಲೆ ರಾರಾಜಿಸುತ್ತಿದೆ.
ನಿನ್ನ ದೇವಾರಾಧನೆಗಾಗಿ ಯಾವ ಯಾವ ಮೂಲೆಗಳಿಂದ ಹೂ ಕೊಯ್ದು ತರುತ್ತಿರುವೆ, ಓ ನನ್ನ ಪ್ರೇಮ ವನ ವಿಹಾರಿ?
Leave A Comment