ನಿನ್ನ ಬೆನ್ನನ್ನಿಗೋ ತಟ್ಟಿ ಚಪ್ಪರಿಸಿ ಹೇಳುತ್ತಿದ್ದೇನೆ!

ನನ್ನ ವಾಣಿಯ ಕೇಳಿ ನಿನಗೆ ಕೆಚ್ಚುದಿಸಲಿ; ನಿನ್ನಾತ್ಮದಲಿ ನೆಚ್ಚುದಿಸಲಿ:

ಕೊರಗುತಿಹೆ ಏಕೆ? ಬ್ರಹ್ಮಾಂಡವೆಲ್ಲವೂ ನಿನಗಾಗಿರೆ, ಅಮೃತಾತ್ಮ ನೀನಾಗಿರೆ, ಕೊರಗುತಿಹೆ ಏಕೆ?

ಎದ್ದೇಳು! ನಿನ್ನ ಮಹಿಮೆಯ ನೀನು ಕಾಣು! ಎದೆಯ ಮಬ್ಬಳಿಯಲಿ; ಕಾಂತಿ ಕಣ್ಣಿಗೆ ಬರಲಿ; ಶಾಂತಿಯಾನಂದಗಳ ಕಡಲು ಮೇರೆವರಿಯಲಿ.

ನೋಡಲ್ಲಿ! ನಿನಗಾಗಿ ಹೊಳೆಯುತಿದೆ ತರಣಿ;

ನಿನಗಾಗಿ ತರಣಿಯನು ಸುತ್ತುತಿದೆ ಧರಣಿ;

ಗಾಳಿ ಬೀಸುತಿದೆ; ಬೆಂಕಿಯುರಿಯುತಿದೆ; ಚೈತ್ರಾದಿ ಮಾಸಗಳೂ ವಸಂತಾದಿ ಋತುಗಳೂ ದಿವಾರಾತ್ರಿಗಳೂ ನಿನಗಾಗಿ ಅನವರತವೂ ವಿಶ್ರಾಂತಿಯಿಲ್ಲದೆ ದುಡಿಯುತ್ತಿವೆ.

ನಿನಗಾಗಿ ನಿದ್ದೆಯಿಲ್ಲದೆ ಕಾಲದೇಶಗಳೆಚ್ಚತ್ತು ಜಾಗರಣೆ ಮಾಡುತ್ತಿವೆ.

ನಿನಗಾಗಿ ದೂರದಾಕಾಶದಾನಂತ್ಯದಲಿ ಕೋಟಿತಾರೆಗಳೆಲ್ಲ ಅನಾದಿಕಾಲದಿಂದಲೂ ಯಾತ್ರೆಗೈಯುತ್ತಿವೆ;

ನಿನ್ನ ಕ್ರೀಡೆಗೆ ಉದ್ಯಾನಗಳ ರಚಿಸಲೆಂದು ಜ್ಯೋತಿವತ್ಸರ ದೂರದಾಚೆಯಲಿ ಮಹಾನೀಹಾರಿಕೆಗಳೆಲ್ಲ ಸಂಮ್ಮೇಲಂಗೈದು ಕಠೋರ ತಪೋತಾಪದಲಿ ತೊಳಲಿ ಬಳಲುತ್ತಿವೆ.

ಯುಗಯುಗಾಂತರಗಳು ಪೊರೆದಿಹವು ನಿನ್ನನು ತಮ್ಮ ಗಬ್ಬದಲಿ ಬೈತಿಟ್ಟು;

ಎಲ್ಲ ನಕ್ಷತ್ರಗಳ ಅಗ್ನಿಸ್ಪರ್ಶವೂ ನಿನಗಾಗಿದೆ;

ಅಗ್ನಿರೂಪಿಣಿ ಪೃಥ್ವೀಮಾತೆ ಸುಂದರ ವಸುಂಧರೆಯಾಗಿಹಳು ನಿನಗಾಗಿ;

ಜಡದಿಂದ ಚೈತನ್ಯ ಚಿಮ್ಮಿದುದು ನಿನಗಾಗಿ;

ಧರೆಯಾದಿಕಾಲದಲಿ ಬೆಂಕಿಯಾವಿಗಳಿಂದ ನೀರು ನೆಲ ಗಾಳಿಗಳು ಮೂಡಿದುದು ನಿನಗಾಗಿ;

ಸಸ್ಯಗಳು ಹುಟ್ಟಿದುದು ನಿನಗಾಗಿ;

ವ್ಯಾಳಾದಿ ಮಹಾಪ್ರಾಣಿಗಳು ಲಕ್ಷಾಂತರ ವರ್ಷ ಪರ್ಯಂತ ಪೃಥ್ವಿಯನ್ನಾಳಿದುದೂ ನಿನಗಾಗಿ!

ನಿನ್ನನವುಗಳು ಮೇವಿನಲಿ ಮೆಲುಕಿಟ್ಟು ಕಾಪಾಡಿವೆ!

ಎನಿತು ಪೀಠಿಕೆಗಳಾಗಿವೆ ನಿನಗೆ! ಎನಿತು ನಾಂದಿಗಳಾಗಿವೆ ನಿನಗೆ?

ಎದ್ದೇಳು! ನಿನ್ನ ಮಹಿಮೆಯ ನೀನು ಕಾಣು! ತತ್ ತ್ವಮಸಿ! ತತ್ ತ್ವಮಸಿ! ತತ್ ತ್ವಮಸಿ!