ಈ ಶಾರದ ಪ್ರಾತಃಕಾಲದಲಿ ನಿನ್ನ ಮಂದಹಾಸದ ಮನೋಹರ ಕಾಂತಿ ಎನಿತು ಸ್ವರ್ಗೀಯ ಸುಂದರವಾಗಿ ಜಗವನೆಲ್ಲ ಹಬ್ಬಿ ತಬ್ಬಿದೆ!

ಉಣ್ಣೆಯಂದದ ಬೆಣ್ಣೆಮುಗಿಲು ಮುತ್ತಿದ ಗಿರಿಯ ನೆತ್ತಿ ನೊರೆನೊರೆಯೆದ್ದ ನೀರಿನಲಿ ಮೀಯಲೆಂದು ಮುಳುಗಿರುವ ಮದ್ದಾನೆಯ ಮೈತುದಿಯಂತಿದೆ!

ಹುಲ್ಲು ಹಸನಾಗಿ ಹಬ್ಬಿ ಹುಲುಸಾಗಿ ಬೆಳೆದಿರುವ ಹಸುರು ಬಯಲಿನಲಿ ಬಿಳಿಯ ಪುಡಿಮುತ್ತುಗಳನು ದಟ್ಟವಾಗೆರಚಿದಂತಿರುವ ಹಿಮಮಣಿರಾಶಿಯ ನಡುನಡುವೆ, ಅಲ್ಲಲ್ಲಿ, ರನ್ನದ ಕಿರುಹಣತೆಗಳಿಗೆ ಬಣ್ಣದೆಣ್ಣೆಯನು ಹಾಕಿ ಚಿನ್ನದ ಬೆಳ್ಳಿಯ ಪಚ್ಚೆಯ ನೀಲಿಯ ಬತ್ತಿಗಳನಿಟ್ಟು, ಕಾಮನ ಬಿಲ್ಲಿನ ಬೆಂಕಿಯನು ಹೊತ್ತಿಸಿದ ಕಿರು ಸೊಡರುಗಳಂದದಲಿ, ಹುಲ್ಲೆಸಳುಗಳಗ್ರದಲಿ, ಎಳನೇಸರ ಕದಿರುಗಳಲಿ, ಮೆಲ್ಲೆಲರ ತೀಟದಲಿ ಕಿರಿಯುರಿಗಳಂತೆ ನಲಿನಲಿದು ಮಿರುಮಿರುಗುವ ಹಿರಿಹನಿಗಳಿಂದ ಶರತ್ಕಾಲದಲಿ ಕಾರ್ತಿಕದ ದೀಪಾವಳಿ ಮಹೋತ್ಸವವಾಗುತ್ತಿದೆ!

ಬಣ್ಣನೆಗಸದಳವಾಗಿ ಬಣ್ಣದುರಿಯುರಿದು ಕಣ್ಣಸೆಳೆಯುವ ಓ ಸಣ್ಣ ಹನಿಯೆ, ನಿನ್ನೊಳಿರುವಂತೆಯೆ ನನ್ನೊಳೂ ಜ್ಯೋತಿ ಅಂತರ್ಯಾಮಿಯಾಗಿ ನಾನೂ ನಿನ್ನಂತೆ ತಳತಳಿಸಲಿ!

ಶಾಶ್ವತ ಮಹಾಪರ್ವತಗಳು ಚೂರುಚೂರಾಗಿ ಲಯಹೊಂದಿದ ಮೇಲೆ ನಶ್ವರ ಕ್ಷುದ್ರ ಹಿಮಮಣಿಗಳು ಚಿರವಾಗಿ ಮಿರುಗುವ ಕಾಲವೈತರುತ್ತದೆ.