ನಿನ್ನ ಹಣೆ ನೀಲಿಯಾಗಸದಂತೆ ಬಿತ್ತರ;

ಹುಬ್ಬು ಬಿದಿಗೆಯ ಎಳವೆರೆಯಂತೆ ಮನೋಹರ;

ಕಣ್ಣು ಕದ್ದಿಂಗಳ ತಾರಗೆ;

ಮುಂಗುರುಳು ಕಾರಿರುಳಿನ ಕಗ್ಗತ್ತಲೆಯಂತೆ ರಾಶಿರಾಶಿಯಾಗಿ ಬೆಳ್ದಿಂಗಳಂದದ ಮುದ್ದು ಮೊಗವನು ಮುತ್ತಿದೆ;

ಕೆಂದೊಂಡೆಯ ಹಣ್ಣಿನಂತಿರುವ ನಿನ್ನ ಚೆಂದುಟಿ ಕಿರುಜೇನಿನ ಹಿನಿಹಲ್ಲೆಯಂತೆ ಮೃದು, ಮಧುರ, ಸುಂದರ.

ನಿನ್ನ ಕೆನ್ನೆಗಳಲಿ ಸಗ್ಗಸೊಗ ಹೆಪ್ಪುಗಟ್ಟಿ ನಿಂತಿದೆ.
ನೀನು ಹುಣ್ಣಿಮೆಯಿರುಳ ಹೊಂಗನಸು;
ಕದ್ದಿಂಗಳ ಮುದ್ದು ನಿದ್ದೆ.
ನಿನ್ನನೆನಿತು ಮುದ್ದಿಸಿದರೂ ನನಗೆ ತಣಿವಿಲ್ಲ.
ನಿನ್ನನೆನಿತು ಬಿಗಿಯಪ್ಪಿದರೂ ನನಗೆ ದಣಿವಿಲ್ಲ.
ನೀನೆನ್ನ ಚಿನ್ನ, ರನ್ನ, ಸ್ವಾಮಿ, ಸ್ವರ್ಗ, ದೇವರು;
ನನ್ನ ಸರ್ವಸ್ವವೂ ನೀನೆ!
ನೀನೆನ್ನ ರಾಧೆ, ಕೃಷ್ಣ, ಪ್ರೇಮ, ಪ್ರಾಣ;
ನನ್ನ ಜೀವದ ಜೀವ!
ನಾನಿಲ್ಲ, ನಾನಿಲ್ಲ!
ನೀನೆ ಇರುವುದೆಲ್ಲ, ಓ ನನ್ನ ನಲ್ಲ!