ಬೇಸಗೆಯ ನಡುಹಗಲಿಗೆ ಮತ್ತು ನೆತ್ತಿಗೇರಿದೆ. ನಾಡೆಲ್ಲ ಮೂರ್ಛೆಗೊಂಡಿದೆ.

ರಾಮರಸಪಾನಮಾಡಿರುವ ಕಬ್ಬಿಗನ ತಲೆಯಲ್ಲಿ ತಿರುಗುವ ಸವಿಯಾದ ಹಸುರು ಹೆಗ್ಗನಸುಗಳು ಭಾವದ ಬೇಗೆಗೆ ಮೈಮರೆಯುವಂತೆ ಅರಣ್ಯಮಂಡಿತ ಪರ್ವತಶ್ರೇಣಿಗಳು ದಿಗಂತದಲ್ಲಿ ಧೀರವಾಗಿ ಮೇಲೆದ್ದು ಹಗಲ್‌ನಿದ್ದೆಗೈಯುತ್ತಿವೆ.

ಮಧುಪಾನದಿಂದ ಮೈಮರೆತು ಮುಗ್ಗರಿಸುವ ಕಾಮುಕನಂತೆ ಹುಚ್ಚೆದ್ದ ಹಗಲುಸಿರು ಬನಬನದ ಮರಗಳ ನಿರಿದಳಿರಲಿ ಹಾಯ್ದು ಬಟ್ಟೆಗೆಟ್ಟು ತೊಳಲುತ್ತಿದೆ.

ಕಾಮಳ್ಳಿ ಕಾಜಾಣ ಕೋಗಿಲೆ ಗಿಳಿ ಲಾವುಗೆ ಚೋರೆಗಳು ಎಲ್ಲ ಉರಿಬಿಸಿಲಿನಲಿ ಮಾತುಗೆಟ್ಟು ಮೌನವಾಗಿ ತಳಿರ ತಣ್ಣೆಳಲಿನಲಿ ಜೋಂಪಿಸಿ ಕನವರಿಸುತ್ತಿವೆ.

ಹೆಣೆದುಕೊಂಡ ಮರಗಳ ತಣ್ಣನೆಯ ನೆಳಲ್ಗತ್ತಲಲಿ ತುರುಗಳೆಲ್ಲ ಕುಗುರುತ್ತ ಮೆಲಕುಹಾಕುತ್ತಿವೆ; ದನಗಾಹಿ ಹೈದನು ತಂಗಾಳಿಯಲ್ಲಿ ನಿದ್ದೆ ಗದ್ದಿದಾನೆ.

ಹುಳಿಯಲದ್ದಿದ ಉಕ್ಕಿನ ಬಣ್ಣದ ನೀಲಿಯಾಗಸದಲ್ಲಿ ಎಲ್ಲಿಯೋ ಒಂದೆರಡು ಕೆಲಸವಿಲ್ಲದ ತುಂಡುಮೋಡಗಳು ಕಾಲಹರಣ ಮಾಡುತ್ತಿವೆ.

ಎಲ್ಲವೂ ನಿಶ್ಚಲ; ಎಲ್ಲೆಲ್ಲಿಯೂ ನೀರವ; ವೈಶಾಖ ಮಧ್ಯಾಹ್ನದ ಕೈವಲ್ಯ ಸುಷುಪ್ತಿ!

ಅಲೆಯುವ ಬಿಕಾರಿಗಾಳಿಯ ಪದಹತಿಗೆ ನೆಲದ ಮೇಲೆ ದಟ್ಟಯಿಸಿರುವ ತರಗೆಲೆಗಳು ಮರ್ಮರನಾದಗೈಯುತ್ತಿವೆ, ನಿದ್ದೆಯಲ್ಲಿರುವ ಸದ್ದಿಲಿ ಬನವೆ ಕನಸಿನಲ್ಲಿ ಕನವರಿಸುವಂತೆ.

ಬೇರೆ ಯಾರೂ ಇಲ್ಲ. ರವಿ ಕವಿ ಇಬ್ಬರೆ ನೋಟಕರು. ಇಂತಹ ಎನಿತು ಹಗಲುಗಳು ಯುಗಯುಗಗಳ ಬೆಳಗಿವೆ!