ವಜ್ರವನಾಗಿಸು ಈ ಇದ್ದಲಿನ ಚೂರನು
ನಿನ್ನಡಿಯ ವಿದ್ಯುತ್ ಸ್ಪರ್ಶದಿಂದ,
ಓ ಜಗದ್ಗುರುವೆ:
ವಜ್ರವಾಯುಧವಾಗಿ ಇಂದ್ರಹಸ್ತವ ಸೇರಿ
ಆಸುರೀ ದಮನ ದಲನಕೆ ನಿವೇದಿತವಾಗಲಿ!

ಬೆಂಕಿಯನೆಚ್ಚರಿಸು ಈ ಬಣಗು ಕಟ್ಟಿಗೆಯಲ್ಲಿ
ನಿನ್ನ ಚಿದಗ್ನಿಯಾಲಿಂಗನದಿಂದ,
ಓ ಅಗ್ನಿಮೂರ್ತಿ:
ಪುರುಷೋತ್ತಮನವತಾರದ ಕೈಯ ವಿಭೂತಿಯಾಗಿ
ಈ ಕೊಳ್ಳಿಯೆ ತಮೋಕಾನನಕೆ ದವಾಗ್ನಿಯಾಗಲಿ!

ಪದ್ಮವನುದ್ಭವಿಸು ಈ ಕೆರೆಯ ಕೆಸರಿನಲಿ
ನಿನ್ನ ಪದಚುಂಬನ ಪವಾಡದಿಂದ,
ಓ ಋತಚಿನ್ಮಯೀ ಜಗನ್ಮಾತೆ:
ದೇವಪೂಜಿತವಾಗಿ ಅದು ದೇವದೇವನ ವರದ ಕರದ
ಕೃಪಾನಿಕೇತನವಾಗಲಿ!