ಸಂಧ್ಯಾರಮಣಿ ಕೈಯಲ್ಲಿ ಹೊಂದಳಿಗೆಯನು ಹಿಡಿದು ಸ್ವರ್ಣಸಲಿಲವನು ಚಿಮುಕಿಸುತ, ಭೂಮ್ಯಾಕಾಶಗಳಿಗೆ ರಂಗು ಬಳಿದು, ಬೆಟ್ಟಕಣಿವೆಗಳನು ಏರಿ ಇಳಿದು, ಹಕ್ಕಿಗಳನು ಗೂಡಿಗಟ್ಟುತ್ತ ಪೊದೆಗಳ ನಡುವೆ ಬಳುಕಿ ನಲಿದಾಡಿ ಬಂದಳು.

ಸ್ವರ್ಣ ಸಲಿಲದಿಂದ ತೊಯ್ದ ಪಶ್ಚಿಮ ದಿಗ್ಭಾಗದ ಮೇಘಮಾಲೆಗಳು ಕುಂಕುಮರಾಗದಿಂದ ಕೆಂಪಾದುವು; ವಿವಿಧ ವರ್ಣಚ್ಛಾಯೆಗಳನು ಪಡೆದು ಸುಂದರ ಸುಮನೋಹರವಾದುವು.

ಸಂಧ್ಯೆಯ ಬಣ್ಣದ ಜೋಗುಳದಿಂದ ಭೂದೇವಿಯ ಬಳಲಿದ ಕಣ್ಣೆವೆಗಳು ಒಯ್ಯನೆ ಮುಗುಳಿದುವು. ನಕ್ಷತ್ರಗಳು ಕಣ್ದೆರೆದು ಎಚ್ಚತ್ತುವು. ಸಂಧ್ಯೆಯ ಇಂದ್ರಜಾಲದಿಂದ ಮೂಡಿದ ಯಾಮಿನಿಯ ಮಾಯೆ ಮಹಿಯನ್ನು ಮುಸುಗಿತು.

ನಾನು ನಿನ್ನನೇ ಕುರಿತು ಚಿಂತಿಸುತ್ತ ಕತ್ತಲೆಗಿಳಿದೆ.