ಮುಗಿಲಿನ ಮನೆಯಿಂದ ಎಡೆಬಿಡದೆ ಜಿನುಗುವ ಮಂಜಿನ ಸೋನೆಯ ಬೆಳ್ದೆರೆಯ ಮರೆಯ ಹಿಂಗಡೆಯಲ್ಲಿ ಮಾಗಿಯ ಉಷೆ ನಾಚಿ ಬೆಳ್ಪೇರಿಹಳು. ಇಬ್ಬನಿಯ ಬೆಳ್ಮಬ್ಬು ಮಲೆನಾಡಿನ ವನಪರ್ವತ ಕಂದರಗಳನ್ನು ತಬ್ಬಿರುವುದು.

ಉದಯ ಸೂರ್ಯದೇವನ ಜ್ಯೋತಿರ್ಮಯವಾದ ಸ್ವರ್ಣರಥದ ಶ್ವೇತ ಸಪ್ತಾಶ್ವಗಳು ಮಾಗಿಯ ಚಳಿಯಲ್ಲಿ ಮೈಯುಡುಗಿ ಮರವಟ್ಟು ಪೂರ್ವಾಚಲವ ಅಡರಲಾರದೆ ಸೋತು ಬೆಚ್ಚನೆ ಸುಯ್ದು ತಿಣುಕುತ್ತಿರುವುವು. ಅರುಣಸಾರಥಿ ಕುದುರೆಗಳನು ಬೋಳೈಸಿ ಚಪ್ಪರಿಸಿ ಚೋದಿಸಿ ಕೋಪದಿಂದ ಕೆಂಪೇರುತಿಹನು.

ಎಚ್ಚತ್ತ ವಿಹಂಗಮಗಳು ತರುಪರ್ಣಕುಟೀರಗಳಲ್ಲಿ ಹುದುಗಿ ಮಂಜು ಹಿಂಜರಿಯಲೆಂದು ಮೌನಧ್ಯಾನಾಸಕ್ತವಾಗಿಹವು.

ಇಬ್ಬನಿ ತಬ್ಬಿದ ಮರದೆಲೆಗಳಿಂದ ಹನಿ ತೊಟ್ಟಿಕ್ಕುತ್ತಿದೆ. ವಸಂತ ವಿಯೋಗದ ವಿರಹಯಾತನೆಯಿಂದ ಶ್ವೇತವಸನ ಧಾರಿಣಿಯಾಗಿ ಅವಕುಂಠಿತೆಯಾದ ವನರಮಣಿ ಕಂಬನಿಗರೆದು ನೀರವವಾಗಿ ರೋದಿಸುವಂತಿದೆ.

ಕಣಿವೆಯಲ್ಲಿರುವ ಹಳ್ಳಿಯ ಗುಡಿಸಲಿನಲ್ಲಿ ಪೇರೊಲೆಯ ಬೆಂಕಿ ಚಳಿಯೊಡನೆ ಹೋರಾಡುತ್ತಿದೆ. ಕೊರೆಯುವ ಕುಳಿರ್ಗಾಳಿಯಲ್ಲಿ ಸೆಡೆತು ನಡುಗಿ ಹಳ್ಳಿಗರು ಅಗ್ನಿದೇವನ ಮುಂದೆ ತಮ್ಮ ಪುಟ್ಟ ಸಂಸಾರಗಳ ಸಣ್ಣ ಕೊರತೆಗಳನು ಕುರಿತು ಅಹವಾಲು ಗೈಯುತಿದಾರೆ. ಅವರಿಗೂ ಜಗತ್ತಿಗೂ ನಡುವೆ ಸಹ್ಯಾದ್ರಿಯ ವನಪರ್ವತಶ್ರೇಣಿಗಳು ತತ್ತ್ವಜ್ಞಾನಿಗಳಂತೆ ಧೀರವಾಗಿ ನಿಂತಿವೆ!

ಒಲೆಯ ಬಳಿಯಲ್ಲಿ ಸಣ್ಣ ನಾಯಿಯೊಂದು ಕುಳಿತು ಎಲ್ಲವನ್ನೂ ತಿಳಿದುಕೊಳ್ಳುವಂತೆ ನಟಿಸುತ್ತಿದೆ. ಕ್ಷುದ್ರಕ್ಷುದ್ರತಮವಾದ ಶುನಕವೂ ನಿನ್ನ ದೃಷ್ಟಿಗೆ ಬಾಹಿರವಲ್ಲ! ಅನಂತ ಯಾತ್ರಿಕರ ಅನಂತ ಸಹಗಾಮಿಯೆ, ನಾಯಿಯ ಬಳಿಯಲಿ ನಿಂತು ಮುಗುಳುನಗೆ ಬೀರುವ ನಿನ್ನನು ನೋಡಿ, ನಿನ್ನನು ಪಡೆದವನು ನಾನೊಬ್ಬನೇ ಎಂಬ ಹೆಮ್ಮೆ ನಾಚಿ ದೂರವಾದುದಯ್ಯ!

ಅಮಿತ ವೇಷಧಾರಿ, ಸುಗ್ಗಿಯ ವೇಷದಂತೆ ಮಾಗಿಯ ವೇಷವೂ ನಿನಗೆ ಒಪ್ಪುತ್ತದೆ.