ಗುಡಿಯಲೇಕೆ ಅವರು ನಿನ್ನನು ಹುಡುಕಬಾರದು? ಗುಡಿಯಲೇಕೆ ಅವರು ನಿನ್ನನು ಪಡೆಯಬಾರದು? ಹುಡುಕಲಿ! ಪಡೆಯಲಿ!

ಎಲ್ಲಿಯಾದರೇನು? ಎಂತುಟಾದರೇನು? ನಿನ್ನನು ಹುಡುಕಿದರಾಯಿತು. ನಿನ್ನನು ಪಡೆದರಾಯಿತು. ಹುಡುಕುವುದು ಮುಖ್ಯವಲ್ಲವೆ? ಪಡೆಯುವುದು ಗುರಿಯಲ್ಲವೆ?

ಏಕೆಂದರೆ, ನೀನು ಎಲ್ಲೆಲ್ಲಿಯೂ ಇರುವೆ; ಎಲ್ಲದರಲ್ಲಿಯೂ ಇರುವೆ; ಎಲ್ಲವೂ ಆಗಿರುವೆ.

ಏಕೆಂದರೆ, ಎಲ್ಲ ಭಾವಗಳೂ ನೀನು; ಎಲ್ಲ ರಾಗಗಳೂ ನೀನು. ಸರೂಪಿಯೂ ನೀನು, ಅರೂಪಿಯೂ ನೀನು.

ಏಕೆಂದರೆ, ನಿನ್ನ ಅರಮನೆಗೆ ನೂರಾರು ಮಾರ್ಗಗಳಿವೆ, ನೂರಾರು ಹೆಬ್ಬಾಗಿಲುಗಳಿವೆ.

ಏಕೆಂದರೆ, ನೀನು ಎಲ್ಲ ಕರ್ಮಗಳ ಆದರ್ಶ; ಎಲ್ಲ ಸಂಸ್ಕಾರಗಳ ಆದರ್ಶ; ಎಲ್ಲ ಭಾವಗಳ ಆದರ್ಶ; ಎಲ್ಲ ಆತ್ಮಗಳ ಆದರ್ಶ!

ಏಕೆಂದರೆ, ನೀನು ಪ್ರೇಮಮಯ!