ಬಾನಿನಿಂದ ಮುದ್ದು ಬೆಳ್ದಿಂಗಳು ಗರಿಗೆದರಿ ಬುವಿಗಿಳಿದು ತಬ್ಬಿಹಬ್ಬಿ ಮಲಗಿತ್ತು. ಹಸುರು ಮೊಟ್ಟೆಯ ಮೇಲೆ ಕಾವು ಕೂರುವ ಚಿನ್ನದ ಹಕ್ಕಿಯಂತೆ.

ಸ್ವರ್ಗ ಮರ್ತ್ಯಗಳೆರಡೂ ಪರಸ್ಪರ ಆಲಿಂಗನ ಚುಂಬನಗಳಿಂದ ಆನಂದ ಸಮಾಧಿಯಲ್ಲಿದ್ದುವು.

ಜೋತ್ಸ್ನಾಮಯಿಯಾದ ಯಾಮಿನಿಯ ಪ್ರಶಾಂತ ನೀಲಾಕಾಶದಲ್ಲಿ ಸಪ್ತರ್ಷಿ ಮಂಡಲ ಮೌನವಾಗಿ ಮಿಣುಕುತಿತ್ತು. ಇತರ ತಾರೆಗಳು ಅಲ್ಲಲ್ಲಿ ತಮ್ಮ ದೀನಧರ್ಮಜ್ಯೋತಿಯನ್ನು ಬೀರುತ್ತಿದ್ದುವು. ಜೊನ್ನದಲ್ಲಿ ಮಿಂದ ತೆಳುಬೆಳ್ಮುಗಿಲು ನೀಲಿಗೆದುರಾಗಿ ತೊಳಲಿ ತೇಲಿದ್ದುವು.

ತೀಡುವ ತಂಗಾಳಿಯ ಮುತ್ತುಗಳಿಂದ ಸರಸಿಯಾದ ಸರೋವರದ ಕಿರುದೆರೆಗಳು ಹಸುರು ದಡದೊಡನೆ ಗಳಪಿದುವು. ಪವನ ಹತಿಗೆ ತಲೆದೂಗುತಿದ್ದ ಜೊಂಡುಹುಲ್ಲಿನಲ್ಲಿ ನೂರಾರು ಕ್ರಿಮಿಕೀಟ ಮಂಡೂಕಗಳು ವಿಕಟ ಕರ್ಕಶವಾಗಿ ಧ್ವನಿಮಾಡಿದುವು. ಕೆರೆಯಂಚಿಗೆ ಅನತಿದೂರದಲ್ಲಿದ್ದ ವಿದ್ಯುದ್ ದೀಪಗಳು ನೀರಿನಲ್ಲಿ ನೀಳವಾಗಿ ನಿಮಿರಿ ನಲಿನಲಿದು ರಂಜಿಸಿದುವು. ತೆರೆತೆರೆಯಲ್ಲಿ ಹಬ್ಬಿದ ತಿಂಗಳುಬೆಳಕು ಒಂದೆಡೆ ದಟ್ಟಯಿಸಿ, ತಣ್ಗದಿರನನ್ನು ಕರಗಿಸಿ ತಗಡುಗೈದಂತೆ, ಕೋಟ್ಯನುಕೋಟಿ ಮಿಂಚುಂಬುಳುಗಳನು ಕೋದು ರನ್ನಗಂಬಳಿ ಮಾಡಿದಂತೆ ರಾರಾಜಿಸಿತ್ತು.

ದೂರ ಹೆದ್ದಾರಿಯಲ್ಲಿ ಎತ್ತಿನ ಗಾಡಿಯೊಂದು ಗಡಗಡ ಕಟಕಟ ರಣಿತದಿಂದ ಹಳ್ಳಿಗೆ ಹೋಗುತ್ತಿತ್ತು.

ಕೆರೆಯ ಹಸುರಂಚಿನ ಮೆತ್ತೆಯ ಮೇಲೆ ಕುಳಿತು ನಾವಿಬ್ಬರೂ ನೋಡಿದೆವು; ಸುಮ್ಮನೆ ನೋಡಿದೆವು, ಒಬ್ಬರೂ ಒಂದು ಮಾತಾಡಲಿಲ್ಲ.

ನೋಟ ಮಾತಿನ ಮೇರೆ ಮೀರಿತ್ತು.

ಅಸಂಖ್ಯ ರಾಗಾನುರಾಗಗಳ ವಿಶ್ವವರ್ಣಶಿಲ್ಪಿಯೆ, ನಿನ್ನ ಇಂದ್ರಜಾಲದ ಸೌಂದರ್ಯವನ್ನು ಮಾತಿಲ್ಲದೆ ಅನುಭವಿಸುವುದನು ನಮಗೆ ಕಲಿಸು.