ಮೇಳ : ಮಡಕೆ ಹೋಗಿ ಟಗರು ಬಂತು ಲಾ ಲಾ ಲಾ
ಟಗರು ಹೋಗಿ ದುಡ್ಡು ಬಂತು ಲಾ ಲಾ ಲಾ
ದುಡ್ಡು ಹೋಗಿ ಕುದುರೆ ಬಂತು ಲಾ ಲಾ ಲಾ

(ನರ್ತಿಸುತ್ತ ಕಿಟ್ಟಿ ಬರುತ್ತಾನೆ)

ಕಿಟ್ಟಿ : ಇದೇನಪ್ಪಾ? ಯಾವೂರಿದು? ಯಾವ್ದೊ ಹಳೇ ಊರಿದ್ದಾಗಿದೆ. ಎಲ್ಲರೂ ಮಲಗಿದಾರೆ. ಆಗಲೇ ಅಷ್ಟೊಂದು ರಾತ್ರಿಯಾಯ್ತೆ? ಇಲ್ಲೇನೋ ಸಂಗೀತ ನಡೆದಿರೋ ಹಾಗಿದೆ.

(ಸಂಗೀತ, ನರ್ತಕಿಯ ಮನೆ. ನಮ್ಮಿಬ್ಬರು ಕೂತಿದ್ದಾರೆ. ಅವರ ಮುಂದೆ ಇವಳ ನೃತ್ಯ. ಕಿಟ್ಟಿ ತನ್ನ ಕುದುರೆಯೊಂದಿಗೆ ಪ್ರವೇಶಿಸಿ ಪ್ರೇಕ್ಷಕರಲ್ಲಿ ಕೂರುವನು. ನೃತ್ಯ ಮುಗಿಯುವುದು. ನರ್ತಕಿ ಕೈ ಮುಗಿಯುತ್ತ ಬರುವಳು, ಅಲ್ಲೇ ಒಂದು ಆನೆ ಇದೆ.)

ನರ್ತಕಿ : ಹ್ಯಾಗಿತ್ತು ನನ್ನ ನೃತ್ಯ, ಸಭ್ಯ ಗೃಹಸ್ಥರೇ?

ಜನರು : ನಿಂದೂ ಒಂದು ನೃತ್ಯವೆ? ಥೂ.

(ಹೋಗುವರು. ನರ್ತಕಿ ಮುಖಭಂಗಿತಳಾಗಿ ನಿಲ್ಲುವಳು)

ಕಿಟ್ಟಿ : ಇನ್ನೇನಿಲ್ಲ, ಚೆನ್ನಾಗಿತ್ತು ಅಂತ ಹೇಳುತ್ತಿದ್ದರು. ಸಭ್ಯ ಗೃಹಸ್ಥರೇ ಅಂದೆಯಲ್ಲ-ಮನೆ ನೆನಪಾಗಿ ಓಡಿಹೋದರು. ಹೇಗಿತ್ತು ನನ್ನ ನೃತ್ಯ ರಸಿಕರೇ ಅಂದಿದ್ದರೆ ಬಾಯಿ ತೆರೆದುಕೊಂಡು ಬಿದ್ದಿರುತ್ತಿದ್ದರು.

ನರ್ತಕಿ : ಹೋಗಲಿ, ನೀ ಯಾರೋ ಹೊಸಬ ಈ ಊರಿಗೆ. ನಿನಗೆ ನನ್ನ ನೃತ್ಯ ಹ್ಯಾಗನ್ನಿಸಿತು?

ಕಿಟ್ಟಿ : ನನಗೆ ? ಅಯ್ಯೊ! ಅಯ್ಯೊ! ಅಯ್ಯೋ-ಅದೇನ್ಹೇಳಲಿ? ನಿನ್ನ ನೃತ್ಯ ನೋಡಲಿಕ್ಕೆ ಎರಡು ಕಣ್ಣು ಸಾಲದು. ಸಂಗೀತ ಕೇಳಲಿಕ್ಕೆ ಎರಡು ಕಿವಿ ಸಾಲದು. ಅವೆರಡನ್ನೂ ಹೋಗಳಲಿಕ್ಕೆ ಒಂದು ನಾಲಗೆ ಸಾಲದು.

ನರ್ತಕಿ : ಹೆ, ಹೆ, ಹೆ, ಅಷ್ಟೊಂದು ಚೆನ್ನಾಗಿತ್ತಾ?

ಕಿಟ್ಟಿ  : ಅಯ್ಯಯ್ಯೊ!

ನರ್ತಕಿ : ಇನ್ನಷ್ಟು ಹೊಗಳಪ್ಪಾ.

ಕಿಟ್ಟಿ : ಸಾಧ್ಯವೇ ಇಲ್ಲ.

ನರ್ತಕಿ : ಯಾಕೆ?

ಕಿಟ್ಟಿ : ಹೇಳಿದೆನಲ್ಲ ಒಂದು ನಾಲಗೆ ಸಾಲದು ಅಂತ.

ನರ್ತಕಿ : ಸಾಧ್ಯವಾದಷ್ಟು ಹೊಗಳಪ್ಪ.

ಕಿಟ್ಟಿ : ಅದೇನು ಸೊಂಟ ತರವತೀಯಾ, ತಿರವತೀಯಾ, ತಿರವತೀಯಾ! ಆ ಸೊಂಟ, ನಿಂದೇನಾ ತಾಯಿ?

ನರ್ತಕಿ : ಹೂನಪ್ಪಾ ನಂದೇ. ನೋಡು ನೋಡು. ಇನ್ನೇನು ಮಂದೀ ಸೊಂಟಾ ತಂದು ತಿರುವುಲಿಕ್ಕಾಗುತ್ತಾ?

ಕಿಟ್ಟಿ : ಆದರೂ ಆ ಸೊಂಟ ನಿಂದಲ್ಲ ಅನ್ನೋ ಹಾಗೆ ತಿರಿವಿದೀಯಲ್ಲ! ತಾಯಿ ಆ ಸೊಂಟ ಕೆಲಸಕ್ಕೆ ಬರುತ್ತಾ?

ನರ್ತಕಿ : ಓಹೊ!

ಕಿಟ್ಟಿ : ಛೇ ಛೇ! ನಿನ್ನಂಥ ಸೊಂಟವನ್ನು ಪಡೆದ ಆ ಭಾರತಾಂಬೆಯೇ ಧನ್ಯಳು! ಆದರೆ ನನಗೆ ದುಃಖ ಯಾಕೆ ಅಂದರೆ ಇಂಥಾ ಕಲೆ ಸವಿಯುವ ರಸಿಕರಿಲ್ಲದೆ ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಹಾಳಾಗಿಹೋಗುವಂತಾಯಿತೆ? ಹಾಯ್, ವಿಧಿಯೆ! ನಿನ್ನ ಲೀಲೆ ಅಗಾಧವಾದದ್ದು.

ನರ್ತಕಿ : ಅವ್ವಯ್ಯ! ಏನ್ಚಂದ ಮಾತಾಡ್ತೀಯ! ನನಗೂ ಹಾಗೇ ಅನ್ನಿಸುತ್ತೆ. ಏನ ಮಾಡಲಿ? ಹಿಂದೆ ರಾಜರಿದ್ದರು. ಒಂದೇ ಸಲ ನನ್ನ ನೃತ್ಯ ನೋಡಿ ಬಹುಮಾನ ವಾಗಿ ಈ ಆನೆ ಕೊಟ್ಟರಪ್ಪ. ಅಂಥಾ ರಸಿಕರು ಈಗೆಲ್ಲಿದ್ದರೆ?

ಕಿಟ್ಟಿ : ನೀನ್ಯಾಕಮ್ಮ ಈ ಪರಿ ಚಿಂತಿ ಮಾಡತಿ? ಒಂದೇ ಸಿನಿಮಾದಲ್ಲಿ ಈ ಸೊಂಟ ತಿರುವು. ಕೂತವರೆಲ್ಲಾ ಒನ್ಸ್‌ಮೋರ್ ಅನ್ನದಿದ್ದರೆ ನನಗೆ ಬಂದು ಹೇಳು. ನಾನು ಒನ್ಸ್‌ಮೋರ್ ಅಂತೀನಿ.

ನರ್ತಕಿ : ಇದ್ದಾರಲ್ಲಪ್ಪಾ ಎಷ್ಟೋ ಜನ ನಟನಟಿಯರು. ನಾನು ವಯಸ್ಸಾದವಳು.

ಕಿಟ್ಟಿ : ಅದಕ್ಕೇ ಹೇಳೊದು ನಿನಗೆ-ಸೊಂಟದಲ್ಲಿರೋ ಬುದ್ಧಿ ತಲೆಯಲ್ಲಿಲ್ಲಾಂತ. ಸಿನಿಮಾದಲ್ಲೇನೋ ನಟಿಯರಿದ್ದಾರೆ ನಿಜ. ಆದರೆ ಇಂಥಾ ಸೊಂಟ ಇದ್ದವರು? ಸಾಧ್ಯವೇ ಇಲ್ಲ. ಹಾಗೇನಾದರೂ ವಯಸ್ಸಾಗಿದೆ ಅಂತ ಅನ್ನಿಸಿದರೆ ಸಿನಿಮಾ ದಲ್ಲಿ ಬರೀ ಸೊಂಟಾನೇ ತೋರಿಸಲಿ-ಮೂರು ಗಂಟೆ ಭರ್ಜರಿಯಾಗಿರುತ್ತೆ. ಬೇಕಾದರೆ ‘ಸೊಂಟದ ಕಥೆ’ ಅಂತಾನೇ ಹೆಸರಿಡಬಹುದು.

ನರ್ತಕಿ : ಅಯ್ಯಾ ಎನಾದರೂ ಮಾಡಿ ನಾ ಸಿನೆಮಾ ಸೇರಲೇಬೇಕಲ್ಲ, ಏನ್ಮಾಡಲಿ? ಕಿಟ್ಟಿ : ನೀನೇ ಒಂದು ಸಿನೆಮಾ ತೆಗೆದುಬಿಡು. ಎರಡು ಮೂರು ಲಕ್ಷ, ಅಷ್ಟೇ.

ನರ್ತಕಿ : ಎರಡು ಮೂರು ಲಕ್ಷ ರೂಪಾಯಿ! ಸಿನೆಮಾ ನಟನಟಿಯರೆಲ್ಲ ಅಷ್ಟೊಂದು ದುಡ್ಡು ಕೊಟ್ಟಿರತಾರಾ?

ಕಿಟ್ಟಿ : ಇಲ್ಲ. ಅವರಿಗೆ ಎರಡು ಮೂರು ಲಕ್ಷ ರೂಪಾಯಿ ಕೊಡತಾರೆ. ನಿನ್ನ ಕೇಸಿನಲ್ಲಾದರೆ ನೀನೇ ಕೊಡಬೇಕು. ಸಿನಿಮಾ ಬಂದ ಮೇಲೆ ನೋಡೋರಿಗೂ ಕೊಡಬೇಕಾದೀತು!

ನರ್ತಕಿ : ಸರಿ ಬಿಡಪ್ಪಾ. ನನಗೆ ಎರಡು ಲಕ್ಷ ರೂಪಾಯಿ ಸಿಕ್ಕು-ನಾನು ಸಿನೆಮಾದಲ್ಲಿ ಸೊಂಟ ಮೂಡಿಸಿ-ಅದೇನೋ ಅಂತಾರಲ್ಲ-ಹಾಗೆ.

(ಹೊರಡುವಳು)

ಕಿಟ್ಟಿ : ಅಮ್ಮಾ, ಇದೊಂದು ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆದ್ದು ಹೋಗತೇನೆ, ಆಗಬಹುದಾ?

ನರ್ತಕಿ : ಅದಕ್ಕೇನಂತೆ ಇರಪ್ಪಾ. ನೀ ಅಲ್ಲಿ ಮಲಗಿಕೊ, ನಿನ್ನ ಕುದುರೆ ಅಲ್ಲಿ, ಆನೇ ಹತ್ತರ ಕಟ್ಟು. ಎರಡು ಮೂರು ಲಕ್ಷ! ನನ್ನ ಶಿವನೇ!

(ಹೋಗುವಳು. ಕಿಟ್ಟಿ ಮಲಗುವನು)

ಭಾಗವತ : ಓಹೋ! ನನಗಿಂತ ಮೊದಲೇ ನಮ್ಮ ಕಥಾನಾಯಕನ ಸವಾರಿ ಬಂದುಬಿಟ್ಟಿದೆ. ಮಹಾ ಆಸಾಮಿ! ಇಲ್ಲಿ ಬಂದವರಿಗೆಲ್ಲಾ ಈ ನರ್ತಕಿಯ ಮೇಲೆ ಕಣ್ಣಾದರೆ ಇವನಿಗೆ ಈ ಆನೇ ಮೇಲೆ ಕಣ್ಣು! ನೋಡಬೇಕು-ಹ್ಯಾಗೆ ಲಪಟಾಯಿಸ್ತಾನೆ ಅಂತ! ಆಗಲೇ ಬೆಳಗಾಯ್ತು. ಅದೇಕೊ ಏಳ್ತಿದಾನೆ! ಎದ್ದು ಕುದುರೆ ಕಾಲಲ್ಲಿ ದುಡ್ಡಿನ ಗುಂಪಿ ಹಾಕ್ತಿದಾನೆ! ಅಕೋ ಬಂದು ಮತ್ತೆ ಮಲಗಿದ! ಯಾಕಿದ್ದೀತು? ನೋಡೋಣ

(ಕಿಟ್ಟಿ ಭಾಗವತ ಹೇಳಿದ ಹಾಗೆ ಎದ್ದು ಕುದುರೆ ಕಾಲಲ್ಲಿ ದುಡ್ಡಿನ ಗುಂಪಿ ಹಾಕಿ ಮತ್ತೆ ಮಲಗುವನು. ನರ್ತಕಿ ಎದ್ದು ಬರುವಳು. ಕುದುರೆ ಕಾಲಲ್ಲಿ ದುಡ್ಡು ನೋಡಿ.)

ನರ್ತಕಿ : ಅವ್ವಯ್ಯಾ! ಇಷ್ಟೊಂದು ದುಡ್ಡು ಕುದುರೆ ಕಾಲಲ್ಲಿ ಬಿದ್ದಿದೆಯಲ್ಲ!

( ಕಡೆ ನೋಡಿ, ಕಿಟ್ಟಿ ಮಲಗಿದ್ದನ್ನು ಗಮನಿಸಿ ದುಡ್ಡು ತೆಗೆದುಕೊಳ್ಳ ಹೋಗುವಳು, ಕಿಟ್ಟಿ ಏಳುವನು)

ಕಿಟ್ಟಿ : ಹಾ ಹಾ ಹಾ! ಹಿಡೀಬೇಡಮ್ಮ, ಅದು ನನ್ನ ದುಡ್ಡು.

ನರ್ತಕಿ : ನಿನ್ನ ದುಡ್ಡು?

ಕಿಟ್ಟಿ : ಹೌದು, ನನ್ನ ಕುದುರೆ ದಿನಾಲು ದುಡ್ಡಿನ ಲದ್ದಿ ಹಾಕತದೆ. ದಿನಕ್ಕೆ ಹತ್ತು ಸಾವಿರ ಹಾಕತದೆ!

ನರ್ತಕಿ : ಆಂ!

ಕಿಟ್ಟಿ : ಅದರಲ್ಲೇನು ಬಮತು?

ನರ್ತಕಿ : (ತನ್ನಷ್ಟಕ್ಕೆ) ಒಂದು ದಿನಕ್ಕೆ ಹತ್ತ ಸಾವಿರ-ಹತ್ತ ದಿನಕ್ಕೆ ಒಂದು ಲಕ್ಷ-ಒಂದು ತಿಂಗಳು ಲದ್ದಿ ಹಾಕಿಸಿದರೆ-ಅಯ್ಯಯ್ಯೋ-ಸುಲಭವಾಗಿ ‘ಸೊಂಟದ ಕಥೆ’ ತೆಗೆದುಬಿಡಬಹುದಲ್ಲ! ಅಯ್ಯಾ! ನನ್ನ ಆನೆ ತಗೊಂಡು ಈ ಕುದುರೆ ಕೊಟ್ಟ ಬಿಡತೀಯಾ ನನಗೆ?

ಕಿಟ್ಟಿ : ಛೇ ಛೇ, ನನಗೇನೋ ಕಣ್ಣೀರ ಕಂಡರೆ ಕರುಣೆ ಬರತಿದೆ ನಿಜ. ಹಾಗಂತ ಇಂಥಾ ಕುದುರೆ ಕೊಟ್ಟುಬಿಡೋದೆ? ಸಾಧ್ಯವಿಲ್ಲ.

ನರ್ತಕಿ : ಅಪ್ಪಾ, ಇಷ್ಟ ವರ್ಷ ನೃತ್ಯ ಮಾಡಿದೆ. ಎಲ್ಲಾ ವ್ಯರ್ಥ. ಈಗ ನನ್ನಾಸೆ ಪೂರೈಸೋ ಹಾಗೆ ಕಾಣತಿದೆ. ದಯಮಾಡಿ ಕೊಡೋರಾಜಾ.

ಕಿಟ್ಟಿ : ನೋಡಮ್ಮಾ, ನನಗೆ ಕರುಣೆ ಬರತಾ ಇದೆ. ಇನ್ನು ಕೇಳಬೇಡ.

ನರ್ತಕಿ : ಅಪ್ಪಾ, ಇಷ್ಟೊಂದು ಅಂಗಲಾಚತಾ ಇದೇನೆ. ನನಗೂ ವಯಸ್ಸಾಯ್ತು. ಸಿನೆಮಾದಲ್ಲಿ ಇರೋದೊಂದು ಸೊಂಟಾನಾದರೂ ಮೂಡಿಸಿ ಸಾಯೋಣ ಅಂದರೆ ಹೀಗಂತಿಯಲ್ಲೊ-ನನ್ನ-ಶಿವನೇ-(ಅಳುವಳು).

ಕಿಟ್ಟಿ : ಸರಿ ಬಿಡಮ್ಮಾ. ನನ್ನನ್ನ ಹ್ಯಾಗೆ ಹಣ್ಣು ಮಾಡಬೇಕಂತ ನಿಮಗೆಲ್ಲಾ ತಿಳಿದಿರೋ ಹಾಗಿದೆ. ಆಯ್ತು ಕುದುರೆ ಕೊಟ್ಟೆ, ಆನೆ ಕೊಡು.

ನರ್ತಕಿ : ಹೌದಾ? ತಗೊಳ್ಳಪ್ಪಾ! ತಗೊ! ದೇವರು ನಿನಗೆ ಒಳ್ಳೇದನ್ನ ಮಾಡಲಿ.

(ಕಿಟ್ಟಿ ಆನೆ ತಗೊಂಡು ಹೋಗುವನು)

ಭಾಗವತ : ಏನಿದು ಬೆಳಗಾಗಿದೆ. ನಮ್ಮ ಕಥಾನಾಯಕ ಆನೆ ಮೇಲೆ ಕೂತುಕೊಂಡು ಹೋಗಿ ಆಗಲೇ ಒಂದು ದಿನ ಆಯ್ತು. ಈ ನರ್ತಕಿ ಕುದುರೆ ಕಾಲಲ್ಲೇ ಕೂತು ಅದು ಲದ್ದೀ ಹಾಕೋದನ್ನೇ ನೋಡ್ತಿದಾಳೆ. ನೋಡೋಣ, ಏನಾಗುತ್ತೋ!

ನರ್ತಕಿ : ಅಯ್ಯ! ಇಷ್ಟು ಹೊತ್ತಾಯ್ತು. ಈ ಕುದುರೆ ನಿಜವಾದ ಲದ್ದೀ ಹಾಕಿತೇ ಹೊರತು ರೂಪಾಯಿ ಹಾಕಲೇ ಇಲ್ಲ! ಈ ಹುಡುಗ ನನಗೇನಾದರೂ ಮೋಸ ಮಾಡಿರಬಹುದಾ? ಯಾಕಿರಬಹುದು?

(ಮಗ, ಮುದುಕಿ, ಭಗವಂತ ಓಡುತ್ತೋಡುತ್ತ ಬರುವರು)

ಭಗವಂತ : ಹಾ! ಇಲ್ಲಿದೆ ನನ್ನ ಕುದುರೆ!

ನರ್ತಕಿ : ಇದು ನನ್ನ ಕುದುರೆ, ನೀ ಯಾವನೋ? ದಿನಕ್ಕೆ ಹತ್ತ ಸಾವಿರ ರೂಪಾಯಿ ಲದ್ದೀ ಹಾಕೋ ಕುದುರೆ! ಆನೆ ಕೊಟ್ಟು ಕೊಂಡಿದೀನಿ?

ಮೂವರು : ಓಹೊ! ಇವಳಿಗೂ ಹಾಕಿದಾನೆ ನಾಮ!

ಭಗವಂತ : ಅಮ್ಮಾ, ಒಬ್ಬ ಬುಶ್‌ಶರ್ಟ್ ಹಾಕಿದ ಹುಡುಗ ಈ ಕುದುರೆ ಕೊಟ್ಟನಾ?

ನರ್ತಕಿ :ಹೌದು.

ಮಗ : ಸರಿ ಸರಿ ಅವನೇ.

ನರ್ತಕಿ : ಯಾಕೆ ಏನಾಯ್ತು?

ಭಗವಂತ : ನೋಡಮ್ಮಾ, ಈ ಕುದುರೆ ಲದ್ದೀ ಹಾಕೋದೇನೊ ನಿಜ, ಆದರೆ ರೂಪಾಯಿ ಹಾಕೋದಿಲ್ಲ. ಆ ಹುಡುಗ ನಿನಗೆ ಮೋಸ ಮಾಡಿದಾನೆ. ನಮಗೂ ಹೀಗೇ ಮೋಸಮಾಡಿ ಬಂದಿದಾನೆ. ಅವನ್ನ ಹಿಡೀಬೇಕು. ಹೊರಟಿದೇವೆ. ನೀನೂ ಬರೋದಿದ್ದರೆ ಬಾ.

ನರ್ತಕಿ : ಹೌದಾ! ನನಗನಿಸಿತ್ತು. ನಡೀರಿ ನಾನೂ ಬರತೇನೆ.

(ಸಂಗೀತದೊಂದಿಗೆ ಎಲ್ಲರೂ ಹೋಗುವರು)